ಗಡಿ ವಿವಾದ: ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕದ ವಾದ ಮಂಡಿಸಲು ಸಿದ್ಧತೆ; CM ಬೊಮ್ಮಾಯಿ

ಬೆಂಗಳೂರು: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕರ್ನಾಟಕದ ವಾದವನ್ನು ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ವಾದಕ್ಕೆ ಗಟ್ಟಿಯಾದ ಆಧಾರವೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

- Advertisement -

ಮಹಾರಾಷ್ಟ್ರದ ಮುಖ್ಯಮಂತ್ರಿಯವರು ಸಭೆ ನಡೆಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಗಡಿವಿವಾದ ಪ್ರಕರಣವಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಗ್ಗೆ ಮಾತುಕತೆ ಮೂಲಕವೂ ವಿವಾದ ಬಗೆಹರಿಸಿಕೊಳ್ಳುವ ಚಿಂತನೆಯಿರುವುದಾಗಿ ತಿಳಿಸಿರುವ ಮಾಹಿತಿ ದೊರೆತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಅವರು ದಾವೆ ಹೂಡಿದ್ದಾರೆ. ಸರ್ವೋಚ್ಛ ನ್ಯಾಯಾಯಲದಲ್ಲಿ ವಾದ ಮಂಡನೆಯ ನಿರ್ಣಯವನ್ನು ಸರ್ವಪಕ್ಷ ಸಭೆ ಹಾಗೂ ಗಡಿಪ್ರಾಧಿಕಾರದೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಕರ್ನಾಟಕ ಸರ್ವೋಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸುವುದಾಗಿ ನಿರ್ಧಾರ ಕೈಗೊಂಡಿದೆ ಎಂದರು.

ಮುಂದಿನ ವಾರ ಸರ್ವಪಕ್ಷ ಸಭೆ:

ಮುಂದಿನ ವಾರ ಸರ್ವಪಕ್ಷ ಸಭೆ ಕರೆಯಲಿದ್ದು, ಮಹಾರಾಷ್ಟ್ರ ರಾಜ್ಯದ ಮಾತುಕತೆ ಮೂಲಕ ವಿವಾದ ಬಗೆಹರಿಸುವ ಇಂಗಿತ ಸೇರಿದಂತೆ ಎಲ್ಲ ವಿಷಯಗಳನ್ನು ಸಮಗ್ರವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿರುವುದಾಗಿ ತಿಳಿಸಿದರು.

ಗಡಿವಿವಾದವೇ ಮುಗಿದುಹೋಗಿದೆ. ಆದರೆ ಮಹಾರಾಷ್ಟ್ರ ರಾಜ್ಯದವರು ಮತ್ತೆ ವಿವಾದವನ್ನು ಎಬ್ಬಿಸಿದ್ದಾರೆ. ಗ್ರಾಮಪಂಚಾಯತಿ ನಿರ್ಣಯ ಹಾಗೂ ಪೂರಕ ವರದಿಗಳೆಲ್ಲವೂ ಇದೆ. ಬರುವ ದಿನಗಳಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಚರ್ಚೆಯಾಗಲಿದೆ ಎಂದು ತಿಳಿಸಿದರು.

- Advertisement -