ಕೌಲಲಾಂಪುರ್: ಸುಧಾರಣಾವಾಧಿ ಅನ್ವರ್ ಇಬ್ರಾಹಿಂ ಅವರ ಪಕತಾನ್ ಹರಪನ್ ಪಕ್ಷ ಇಲ್ಲವೇ ಭರವಸೆಯ ಮೈತ್ರಿಕೂಟವು ಮಲೇಷ್ಯಾದ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು 82 ಸ್ಥಾನಗಳನ್ನು ಗೆದ್ದಿದೆ. ಆದರೆ ಬಹುಮತಕ್ಕೆ 112 ಸ್ಥಾನಗಳ ಅಗತ್ಯವಿದೆ. ಹಿಂದಿನ ಪ್ರಧಾನಿ ಮೊಯ್ದೀನ್ ಅವರ ಮಲಯ್ ಸೆಂಟ್ರಿಕ್ ಪೆರಿಕತನ್ ನಸಿವೋನಲ್ ಪಕ್ಷ ಇಲ್ಲವೇ ರಾಷ್ಟ್ರೀಯ ಮೈತ್ರಿಯು 73 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.
ಪ್ರತಿಪಕ್ಷ ನಾಯಕ ಹಾಗೂ ಸುಧಾರಣಾವಾದಿ ಎಂದೇ ಖ್ಯಾತರಾದ ಅನ್ವರ್ ಇಬ್ರಾಹಿಂ ಒಟ್ಟಾರೆ ಪ್ರಧಾನಿ ಗದ್ದುಗೆಗೇರುವ ಸಾಧ್ಯತೆ ನಿಚ್ಚಳವಾಗಿದೆ. ಇತರ ಪಕ್ಷಗಳು ಮುಂದಿಟ್ಟ ಒಕ್ಕೂಟ ಸರಕಾರ ರಚನೆಗೆ ಅನ್ವರ್ ಅವರ ಕೂಟವು ಒಪ್ಪಿಗೆ ನೀಡಿದೆ. ಆದರೆ ಯಾವುದೇ ಒಪ್ಪಂದವನ್ನು ಮಲೇಷ್ಯಾದ ದೊರೆ ಅಂತಿಮಗೊಳಿಸಬೇಕಾಗಿದೆ.
ಕಳೆದ ಶನಿವಾರ ಮತದಾನ ನಡದಿದ್ದು, ಅತಂತ್ರ ಫಲಿತಾಂಶ ಬಂದಿದ್ದು, ಇದರಿಂದ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. 2018ರಿಂದ ಮಲೇಷ್ಯಾ ಮೂವರು ಪ್ರಧಾನಿಗಳನ್ನು ಕಂಡಿದೆ. ಅನ್ವರ್ ಅವರ ಮೈತ್ರಿ ಗೆಲುವು ಜನಾಂಗೀಯ ಬಿಕ್ಕಟ್ಟು ತರಬಹುದು ಎಂದು ಪೊಲೀಸರು ಎಚ್ಚರಿಕೆ ನೀಡಿ, ದೇಶದ ಎಲ್ಲ ಕಡೆ ಭದ್ರತೆ ಬಿಗಿಗೊಳಿಸಿದ್ದಾರೆ.
ಪ್ರತಿ ಪಕ್ಷ ಪಕತನ್ ಹರಪನ್ ಪಕ್ಷ 82 ಸ್ಥಾನ, ಆಡಳಿತಾರೂಢ ಪೆರಿಕತನ್ ನಾಸಿವೋನಲ್ ಪಕ್ಷ 73 ಹಾಗೂ ಯುನೈಟೆಡ್ ಮಲಯಾ ರಾಷ್ಟ್ರೀಯ ಸಂಘಟನೆಯು 30 ಸ್ಥಾನಗಳನ್ನು ಗೆದ್ದಿದೆ. ಇದು ಈಗ ಸರಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಿದೆ.