ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದುಕೊಳ್ಳಲು ದತ್ತು ಮಕ್ಕಳೂ ಕೂಡ ಅರ್ಹರು: ಹೈಕೋರ್ಟ್‌

Prasthutha|

- Advertisement -

ಬೆಂಗಳೂರು: ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದುಕೊಳ್ಳಲು ದತ್ತು ಮಕ್ಕಳೂ ಕೂಡ ಅರ್ಹರಾಗಿದ್ದು, ಈ ವಿಚಾರದಲ್ಲಿ ಸ್ವಂತ ಮತ್ತು ದತ್ತು ಮಕ್ಕಳಲ್ಲಿ ತಾರತಮ್ಯ ಅಥವಾ ವ್ಯತ್ಯಾಸ ಮಾಡಬಾರದು ಎಂದು ಹೈಕೋರ್ಟ್‌ ಆದೇಶ ನೀಡಿದೆ.

ದತ್ತು ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಬನಹಟ್ಟಿ ತಾಲೂಕಿನ ನಿವಾಸಿ ಎಸ್‌. ಗಿರೀಶ್‌ (32) ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

- Advertisement -

ಸ್ವತಃ ಮಗ ಅಥವಾ ಮಗಳಾಗಲಿ ಹಾಗೂ ದತ್ತು ಮಗ ಅಥವಾ ಮಗಳಾಗಲಿ, ಅವರು ಮಕ್ಕಳೇ ಆಗಿರುತ್ತಾರೆ. ಇದರಲ್ಲಿ ತಾರತಮ್ಯವಿದೆ ಎಂಬುದಾಗಿ ನ್ಯಾಯಾಲಯ ಒಪ್ಪಿಕೊಂಡರೆ, ದತ್ತು ಸ್ವೀಕಾರದ ಉದ್ದೇಶವೇ ಈಡೇರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ದತ್ತು ಮಕ್ಕಳಿಗೆ ಅನುಕಂಪದ ಉದ್ಯೋಗ ನೀಡಲು “ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳು-1996′ ರಲ್ಲಿ ಅವಕಾಶವಿಲ್ಲ ಎಂಬ ಅಭಿಯೋಜನಾ ಇಲಾಖೆಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ, ಅಂತಿಮವಾಗಿ ಅನುಕಂಪದ ಉದ್ಯೋಗಕ್ಕಾಗಿ ಮೇಲ್ಮನವಿದಾರ ಗಿರೀಶ್‌ (ದತ್ತುಪುತ್ರ) ಸಲ್ಲಿಸಿರುವ ಅರ್ಜಿಯನ್ನು 12 ವಾರಗಳಲ್ಲಿ ಪರಿಗಣಿಸಬೇಕು ಎಂದು ಇಲಾಖೆಗೆ ಹೈಕೋರ್ಟ್‌ ನಿರ್ದೇಶಿಸಿದೆ.



Join Whatsapp