ಒಲಿಂಪಿಕ್ಸ್ ಬಳಿಕ ಜಗತ್ತಿನ ಅತಿದೊಡ್ಡ ಕ್ರೀಡಾಹಬ್ಬ ಫುಟ್‌ಬಾಲ್ ವಿಶ್ವಕಪ್ ಟೂರ್ನಿಗೆ ಭಾನುವಾರ ರಾತ್ರಿ ಕತಾರ್‌ನಲ್ಲಿ ಚಾಲನೆ ದೊರೆಯಲಿದೆ. ಅತಿಹೆಚ್ಚು ರಾಷ್ಟ್ರಗಳಲ್ಲಿ ಆಡುವ ಮತ್ತು ಅಪಾರ ಅಭಿಮಾನಿ ಬಳಗದ ಬಲವನ್ನು ಹೊಂದಿರುವ ಕ್ರೀಡೆ ಫುಟ್‌ಬಾಲ್. ಹೀಗಾಗಿಯೇ ಪ್ರತಿ ಬಾರಿಯಂತೆ ಈ ಬಾರಿಯೂ ಫುಟ್‌ಬಾಲ್ ವಿಶ್ವಕಪ್‌ನ ಜ್ವರ ಭಾರತ ಸೇರಿದಂತೆ ಎಲ್ಲೆಡೆಯೂ ವ್ಯಾಪಿಸಿದೆ.
22ನೇ ಆವೃತ್ತಿಯ ಫುಟ್‌ಬಾಲ್ ವಿಶ್ವಕಪ್ ಟೂರ್ನಿಯಲ್ಲಿ 32 ತಂಡಗಳು ಭಾಗವಹಿಸುತ್ತಿವೆ. ಭಾನುವಾರ (ನವೆಂಬರ್ 20) ಆರಂಭವಾಗುವ ಟೂರ್ನಿಯ ಫೈನಲ್ ಪಂದ್ಯವು ಡಿಸೆಂಬರ್ 18ರಂದು ನಡೆಯಲಿದೆ. ಈ ಬಾರಿಯ ವಿಶ್ವಕಪ್ ಆಯೋಜನೆಗೆ ಫಿಫಾ ಖರ್ಚು ಮಾಡುತ್ತಿರುವ ಒಟ್ಟು ಮೊತ್ತ 3585 ಕೋಟಿ!
2002ರಲ್ಲಿ ಜಪಾನ್‌ನಲ್ಲಿ ನಡೆದ 17ನೇ ಆವೃತ್ತಿಯ ವಿಶ್ವಕಪ್‌ನಿಂದೀಚೆಗೆ ಟೂರ್ನಿಯ ಪ್ರಶಸ್ತಿ ಮೊತ್ತದಲ್ಲಿ ಭಾರಿ ಏರಿಕೆಯಾಗಿರುವುದು ವಿಶೇಷ. ಜಪಾನ್‌ನ ಯೊಕಾಹಮಾದಲ್ಲಿ ಜೂನ್ 30ರಂದು ನಡೆದ ಫೈನಲ್ ಪಂದ್ಯದಲ್ಲಿ ಜರ್ಮನಿಯನ್ನು 2- 0 ಗೋಲುಗಳ ಅಂತರದಿಂದ ಮಣಿಸಿದ್ದ ಬ್ರೆಝಿಲ್, ದಾಖಲೆಯ 5ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿತ್ತು. ಐತಿಹಾಸಿಕ ಟ್ರೋಫಿಯ ಜೊತೆ ಬ್ರೆಝಿಲ್, 65.3 ಕೋಟಿ ರೂಪಾಯಿ ನಗದು ಬಹುಮಾನವನ್ನು ಪಡೆದಿತ್ತು.
ಆದರೆ ಈ ಬಾರಿ ಲುಸೈಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪೈಟ್ ವಿಜೇತರು ಬರೋಬ್ಬರಿ 344 ಕೋಟಿ ರೂಪಾಯಿ ನಗದು ಮೊತ್ತ ತಮ್ಮದಾಗಿಸಿಕೊಳ್ಳಲಿದ್ದಾರೆ. ರನ್ನರ್ಸ್ ಅಪ್ ತಂಡ 245 ಕೋಟಿ ನಗದು ಬಹುಮಾನ ಪಡೆಯಲಿದೆ. ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ 220 ಕೋಟಿ ಮತ್ತು 204 ಕೋಟಿ ರೂಪಾಯಿ ನಗದನ್ನು ತಮ್ಮದಾಗಿಸಿಕೊಳ್ಳಲಿವೆ.
2002ರಿಂದ 2022ರವರೆಗೆ, ಕಳೆದ 5 ಫಿಫಾ ವಿಶ್ವಕಪ್‌ಗಳ ಬಹುಮಾನದ ಮೊತ್ತದಲ್ಲಿ ಆದ ಏರಿಕೆ ನೋಡುವುದಾದರೆ,
- 2002 | 65.3 ಕೋಟಿ
- 2006 | 163.37 ಕೋಟಿ
- 2010 | 245 ಕೋಟಿ
- 2014 | 285.50 ಕೋಟಿ
- 2018 | 310 ಕೋಟಿ
- 2022 | 344 ಕೋಟಿ
ಫುಟ್‌ಬಾಲ್ ವಿಶ್ವಕಪ್ ಟೂರ್ನಿಗೆ ಹೋಲಿಸಿದರೆ ಐಸಿಸಿ ಆಯೋಜಿಸುವ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಮೊತ್ತದಲ್ಲಿ ಬಹಳ ದೊಡ್ಡ ವ್ಯತ್ಯಾಸವಿದೆ. ಟಿ20 ವಿಶ್ವಕಪ್ ಆಯೋಜಿಸಲು ಈ ಬಾರಿ ಐಸಿಸಿ ಖರ್ಚು ಮಾಡಿದ ಒಟ್ಟು ಮೊತ್ತ 45.68 ಕೋಟಿ. ಇದರಲ್ಲಿ ವಿಜೇತ ಇಂಗ್ಲೆಂಡ್ ತಂಡ 13.05 ಕೋಟಿ ನಗದು ಬಹುಮಾನ ಪಡೆದರೆ, ರನ್ನರ್ಸ್ ಅಪ್ ಪಾಕಿಸ್ತಾನ 6.52 ಕೋಟಿ ನಗದು ಬಹುಮಾನ ಪಡೆದಿತ್ತು.