ಏಷ್ಯನ್ ಕಪ್ ಟೇಬಲ್ ಟೆನಿಸ್: ಕಂಚು ಪಡೆದು ಇತಿಹಾಸ ನಿರ್ಮಿಸಿದ ಭಾರತದ ಮಣಿಕಾ ಬಾತ್ರಾ

Prasthutha|

ಬ್ಯಾಂಕಾಕ್: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ಬ್ಯಾಂಕಾಕ್’ನಲ್ಲಿ ನಡೆದ ಏಷ್ಯನ್ ಕಪ್ ಟೇಬಲ್ ಟೆನಿಸ್ ಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

- Advertisement -

ಶನಿವಾರ  ನಡೆದ, ತನ್ನ ಚೊಚ್ಚಲ ಸೆಮಿಫೈನಲ್ ಪಂದ್ಯದಲ್ಲಿ, 44ನೇ ಶ್ರೇಯಾಂಕಿತೆ ಆಟಗಾತಿ  ಬಾತ್ರಾ, ವಿಶ್ವದ ನಂ.2 ಆಟಗಾತಿ ಜಪಾನ್’ನ’ ಮಿಮಾ ಇಟೊ ವಿರುದ್ಧ ಸೋಲು ಅನುಭವಿಸಿದ್ದರು. ಕೆಲ ಗಂಟೆಗಳ ಬಳಿಕ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಭರವಸೆಯ ತಾರೆ ಮನಿಕಾ, ಅಮೋಘ ಪ್ರದರ್ಶನ ನೀಡಿದರು.  ವಿಶ್ವ ಆರನೇ ಶ್ರೇಯಂಕಿತೆ ಜಪಾನ್ ದೇಶದವರೇ ಆದ ಹಿನಾ ಹಯಾಟಾ, 4-2 (11-6, 6-11, 11-7, 12-10, 4-11, 11-2) ಅಂತರದಲ್ಲಿ ಮಣಿಸಿ ಐತಿಹಾಸಿಕ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡರು.

ಶುಕ್ರವಾರ, ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ವನಿತಾ  ಟೇಬಲ್ ಟೆನಿಸ್ ಆಟಗಾತಿ ಎಂಬ ಹಿರಿಮೆಗೆ ಮಣಿಕಾ ಬಾತ್ರಾ ಪಾತ್ರರಾಗಿದ್ದರು. ಕೂಟದ ಕ್ವಾರ್ಟರ್ ಫೈನಲ್’ನಲ್ಲಿ, ಮಣಿಕಾ ಬಾತ್ರಾ ತನಗಿಂತ ಉನ್ನತ  ಶ್ರೇಯಾಂಕದ (23) ಆಟಗಾತಿ  ಚೈನೀಸ್ ತೈಪೆಯ ಚೆನ್ ಸು-ಯುರನ್ನು ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ  4-3  (6-11, 11-6, 11-5, 11-7, 8-11, 9-11, 11-9) ಅಂತರದಿಂದ ಮಣಿಸಿದರು. ಇದು ಸು-ಯು ವಿರುದ್ಧ ಆಡಿದ 6 ಪಂದ್ಯಗಳಲ್ಲಿ ಮಣಿಕಾ ದಾಖಲಿಸಿದ ಕೇವಲ 2ನೇ ಗೆಲುವಾಗಿತ್ತು. 16ರ ಸುತ್ತಿನ ಪಂದ್ಯದಲ್ಲೂ ಅಚ್ಚರಿಯ ಫ‌ಲಿತಾಂಶ ದಾಖಲಿಸಿದ್ದ ಬಾತ್ರಾ,  ಚೀನದ 7ನೇ ಶ್ರೇಯಾಂಕಿತ ಆಟಗಾರ್ತಿ ಚೆನ್ ಕ್ಸಿಂಗ್‌ಟಂಗ್ ಅವರನ್ನು ಮಣಿಸಿದ್ದರು.

- Advertisement -

ಪುರುಷರ ಸಿಂಗಲ್ಸ್’ನಲ್ಲಿ ಜಿ. ಸಥಿಯನ್ ಮತ್ತು ಆಚಂತ ಶರತ್ ಕಮಲ್ ಮೊದಲ ಸುತ್ತಿನಲ್ಲೇ ಸೋತು ಹೊರನಡೆದಿದ್ದರು.



Join Whatsapp