ಪಾಕಿಸ್ತಾನದ ವಿರುದ್ಧ ಸುಲಭ ಜಯ | ಚೊಚ್ಚಲ ಟಿ20 ಸರಣಿ ಗೆದ್ದ ಐರ್ಲೆಂಡ್

Prasthutha|

ಲಾಹೋರ್‌: ಪಾಕಿಸ್ತಾನ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಟಿ20 ಪಂದ್ಯದಲ್ಲಿ 34 ರನ್‌ಗಳ ಅಂತರ ಜಯ ದಾಖಲಿಸುವ ಮೂಲಕ ಐರ್ಲೆಂಡ್‌ ವನಿತೆಯರು, ಏಷ್ಯಾ ನೆಲದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

- Advertisement -

ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ಐರ್ಲೆಂಡ್‌ ಮಹಿಳಾ ತಂಡ, 2- 1 ಅಂತರದಲ್ಲಿ ಟಿ20 ಸರಣಿ ಜಯಿಸಿದೆ. ಆ ಮೂಲಕ ಏಷ್ಯಾ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.  

ಲಾಹೋರ್‌ನಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಐರ್ಲೆಂಡ್‌, 4 ವಿಕೆಟ್‌ ನಷ್ಟದಲ್ಲಿ 167 ರನ್‌ ಗಳಿಸಿತ್ತು. ಆದರೆ ಚೇಸಿಂಗ್‌ ವೇಳೆ, ಅರ್ಲೀನ್ ಕೆಲ್ಲಿ ಮತ್ತು ಲಾರಾ ಡೆಲಾನಿ ಬಿಗು ಬೌಲಿಂಗ್‌ ದಾಳಿ ಎದುರು ಬೆದರಿದ ಪಾಕ್‌ ವನಿತೆಯರು 133 ರನ್‌ ಗಳಿಸುವಷ್ಟರಲ್ಲೇ ಆಲೌಟ್‌ ಆಯಿತು. ಆ ಮೂಲಕ ತವರು ನೆಲದಲ್ಲೇ ತೀವ್ರ ಮುಖಭಂಗಕ್ಕೆ ಒಳಗಾಯಿತು. ಆರಂಭಿಕ ಆಟಗಾತಿ ಜವೇರಿಯಾ ಖಾನ್‌ ಅರ್ಧ ಶತಕ ಗಳಿಸಿದರಾದರೂ, ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ತಲಾ 3 ಓವರ್‌ ಬೌಲಿಂಗ್‌ ನಡೆಸಿದ ಅರ್ಲೀನ್ ಕೆಲ್ಲಿ ಮತ್ತು ಲಾರಾ ಡೆಲಾನಿ, ತಲಾ 3 ವಿಕೆಟ್‌ ಪಡೆಯುವ ಮೂಲಕ ಮಿಂಚಿದರು.

- Advertisement -

ಐರ್ಲೆಂಡ್‌ ಪರ ಇನ್ನಿಂಗ್ಸ್‌ ಆರಂಭಿಸಿದ್ದ ಗೇಬಿ ಲೆವಿಸ್ (71 ರನ್‌) ಮತ್ತು ಅಮಿ ಹಂಟರ್‌ (40) ಶತಕದ ಜೊತೆಯಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. 12.5 ಓವರ್‌ಗಳ ತನಕ ಕ್ರೀಸ್‌ನಲ್ಲಿದ್ದ ಈ ಜೋಡಿ 110 ರನ್‌ಗಳನ್ನು ಒಟ್ಟುಗೂಡಿಸಿತು. ಆ ಮೂಲಕ  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐರ್ಲೆಂಡ್‌ ವನಿತೆಯರು, ಮೂರನೇ ಬಾರಿಗೆ ಶತಕದ ಜೊತೆಯಾಟ ಪ್ರದರ್ಶನ ನೀಡಿದಂತಾಗಿದೆ.

ಟಿ20ಗೂ ಮುನ್ನ ನಡೆದ ಏಕದಿನ ಸರಣಿಯಲ್ಲಿ ಪಾಕಿಸ್ತಾನ 3- 0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಗೆಲುವು ಸಾಧಿಸಿತ್ತು.



Join Whatsapp