ಮಂಗಳೂರು: ಮಂಗಳೂರಿನ ಮಳಲಿ ಮಸೀದಿಗೆ ಸಂಬಂಧಿಸಿದ ತೀರ್ಪು ಪ್ರಕಟಗೊಂಡಿದ್ದು, ವಿಶ್ವಹಿಂದೂ ಪರಿಷತ್ ನ ಅರ್ಜಿ ಸ್ವೀಕರಿಸಿರುವ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್, ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ಸಿವಿಲ್ ಕೋರ್ಟ್ ವ್ಯಾಪ್ತಿಯಲ್ಲೇ ಮಳಲಿ ಮಸೀದಿಯ ಅರ್ಜಿ ವಿಚಾರಣೆ ನಡೆಯಲಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕೋರ್ಟ್ ಕಮಿಷನರ್ ನೇಮಿಸಿ ಮಸೀದಿ ಸರ್ವೇ ನಡೆಸುವಂತೆ ಕೋರಿ ವಿಎಚ್ ಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಎಚ್ ಪಿ ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ, ಜನವರಿ 8, 2023ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ಹೇಳಿದೆ. ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ಮಾಡಿ ವಿಎಚ್ ಪಿ ಅರ್ಜಿ ವಜಾಗೊಳಿಸುವಂತೆ ಮಸೀದಿ ಕಮಿಟಿ ಅರ್ಜಿ ಸಲ್ಲಿಸಿತ್ತು. ಆದರೆ ಮಸೀದಿ ಕಮಿಟಿಯ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಮಸೀದಿಗೆ ಸಂಬಂಧಿಸಿದ ವ್ಯಾಜ್ಯವನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದು ಎಂದು ಸಿವಿಲ್ ಕೋರ್ಟ್ ಹೇಳಿದೆ.
ಮಸೀದಿ ವಿಚಾರ ವಕ್ಫ್ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಮಾಡಬಹುದು ಎಂಬ ಮಸೀದಿ ಪರ ವಕೀಲರ ವಾದವನ್ನು ಕೋರ್ಟ್ ಮಾನ್ಯ ಮಾಡಿಲ್ಲ. ಹಾಗಾಗಿ ಮಸೀದಿ ವಿವಾದ ಸಿವಿಲ್ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.