ಪಾಟ್ನಾ: ದೇಶದಲ್ಲಿ ಜಾರಿಯಲ್ಲಿರುವ ಮೀಸಲಾತಿ ಮೇಲಿನ 50 ಶೇಕಡಾ ಮಿತಿಯನ್ನು ತೆಗೆದುಹಾಕುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ.
ಸಾಮಾನ್ಯ ಕೋಟಾದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗಗಳಲ್ಲಿ 10% ಮೀಸಲಾತಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ನಿತೀಶ್ ಕುಮಾರ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ನಾವು ಯಾವಾಗಲೂ EWS ಕೋಟಾವನ್ನು ಬೆಂಬಲಿಸುತ್ತೇವೆ. ಆದರೆ ಮೀಸಲಾತಿ ಮೇಲಿನ 50% ಮಿತಿಯನ್ನು ಹೆಚ್ಚಿಸುವ ಸಮಯ ಬಂದಿದೆ. ಈ ಮಿತಿಯು ಒಬಿಸಿ ಅವರ ಜನಸಂಖ್ಯೆಗೆ ಅನುಗುಣವಾಗಿ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ ಎಂದು ಜೆಡಿಯು ಮುಖಂಡ ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಮಧ್ಯೆ ದೇಶಾದ್ಯಂತ ನೂತನ ಜಾತಿ ಗಣತಿ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.