ಮೋದಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕರೆತರುವಂತೆ ಪ್ರಾಂಶುಪಾಲರಿಗೆ ನೀಡಿದ್ದ ಸುತ್ತೋಲೆಯನ್ನು ವಾಪಸ್ ಪಡೆದ ಶಿಕ್ಷಣ ಇಲಾಖೆ

Prasthutha|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸರ್ಕಾರಿ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ಯಬೇಕು ಎಂದು ನವೆಂಬರ್ 8 ಮಂಗಳವಾರ ಬೆಳಗ್ಗೆ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅಂದೇ ಸಂಜೆ ವಾಪಸ್ ಪಡೆದಿದೆ.

- Advertisement -

ನವೆಂಬರ್ 11ರಂದು ನಗರದ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮತ್ತು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಮೋದಿ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಕರೆತರಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಂಗಳವಾರ ಸುತ್ತೋಲೆ ಹೊರಡಿಸಿದ್ದರು ಮತ್ತು ಪ್ರತಿಯೊಂದು ಶಾಲೆಗೆ ನಿಗದಿಪಡಿಸಿದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ವಿಫಲವಾದ ಕಾಲೇಜುಗಳ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು.

ಆದರೆ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ ಅಂದೇ ಸಂಜೆ ಆದೇಶ ಹಿಂಪಡೆದಿದೆ. ಪಿಎಂ ಮೋದಿ ಅವರ ಉದ್ಘಾಟನೆಗೆ ವಿದ್ಯಾರ್ಥಿಗಳು ಕರೆತರಲು ಪಿಯು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲು ಆದೇಶವನ್ನು ಕಳುಹಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಭದ್ರತಾ ಅನುಮತಿ ಇಲ್ಲದ ಕಾರಣ, ಪಿಯು ಇಲಾಖೆ ತಕ್ಷಣವೇ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಆದೇಶ ವಾಪಸ್ ಪಡೆದ ಸುತ್ತೋಲೆಯಲ್ಲಿ ಹೇಳಿದೆ.

- Advertisement -

ಮೋದಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ಸುತ್ತೋಲೆಯನ್ನು ಖಂಡಿಸಿದ್ದು, ಈ ಸುತ್ತೋಲೆ ಹತಾಶೆಯ ಸಂಕೇತವಾಗಿದೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸೋಲಲಿದೆ ಎಂಬುದರ ಸೂಚನೆಯಾಗಿದೆ ಎಂದು ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ನ.5ರಂದು ಉಡುಪಿಯ ಬೈಂದೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಬೊಮ್ಮಾಯಿ ಆಗಮಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಬೈಂದೂರು ಶೈಕ್ಷಣಿಕ ವಲಯದ ಎಲ್ಲಾ ಶಿಕ್ಷಕರಿಗೆ ಕಡ್ಹಾಯವಾಗಿ ಹಾಜರಾಗುವಂತೆ ಸೂಚನೆ ನೀಡಿದ್ದೂ ಕೂಡಾ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.



Join Whatsapp