ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12, ಗ್ರೂಪ್-2ರ ಮೊದಲೆರಡು ಪಂದ್ಯಗಳಲ್ಲಿ ಸೋತ ಬಳಿಕ ಟೂರ್ನಿಯಿಂದ ಬಹುತೇಕ ಹೊರನಡೆದಿದ್ದ ಪಾಕಿಸ್ತಾನ, ನಂತರದ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
ಗುರುವಾರ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಪಾಕ್, ಆಫ್ರಿಕಾ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನುಸಾರ 33 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಬಾಬರ್ ಅಝಮ್ ಬಳಗ ಸೂಪರ್ 12, ಗ್ರೂಪ್-2ರ ಅಂಕಟಪಟ್ಟಿಯಲ್ಲಿ ಶ್ರೀಲಂಕಾವನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ. ಸೂಪರ್ 12ರ ತನ್ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ, ಭಾನುವಾರ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೂ ಸಹ, ಭಾರತ-ಝಿಂಬಾಬ್ವೆ ಪಂದ್ಯದ ಫಲಿತಾಂಶ ಪಾಕ್ ಪಾಲಿಗೆ ನಿರ್ಣಾಯಕವಾಗಲಿದೆ.
ಗ್ರೂಪ್-2ರಲ್ಲಿ ಎಲ್ಲಾ 6 ತಂಡಗಳು ಈಗಾಗಲೇ ತಲಾ 4 ಪಂದ್ಯಗಳನ್ನಾಡಿದ್ದು, ಅದಾಗಿಯೂ ಯಾವುದೇ ತಂಡಗಳು ಸೆಮಿಫೈನಲ್ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿಲ್ಲ. 6 ಅಂಕಗಳೊಂದಿಗೆ ಟೀಮ್ ಇಂಡಿಯಾ ಗ್ರೂಪ್-2ರಲ್ಲಿ ಅಗ್ರಸ್ಥಾನಿಯಾಗಿದೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ, 2 ಗೆಲುವು 1 ಸೋಲು ಹಾಗೂ 1 ಡ್ರಾದೊಂದಿಗೆ 5 ಅಂಕಗಳನ್ನು ಹೊಂದಿದೆ. 4 ಪಂದ್ಯಗಳಲ್ಲಿ ತಲಾ 2 ಗೆಲುವು-ಸೋಲು ಕಂಡಿರುವ ಪಾಕಿಸ್ತಾನ ಬಳಿ 4 ಅಂಕಗಳಿವೆ.
ನವೆಂಬರ್ 6, ಭಾನುವಾರ ಅಡಿಲೇಡ್ನಲ್ಲಿ ನಡೆಯುವ ಸೂಪರ್ 12 ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆಫ್ರಿಕಾ ಗೆಲುವು ಸಾಧಿಸಿದರೆ 7 ಅಂಕಗಳೊಂದಿಗೆ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಅದೇ ದಿನ ನಡೆಯುವ 2ನೇ ಪಂದ್ಯದಲ್ಲಿ ಪಾಕಿಸ್ತಾನ-ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೂ ಸಹ, ಭಾರತ-ಝಿಂಬಾಬ್ವೆ ತಂಡಗಳ ಫಲಿತಾಂಶದ ಮೇಲೆ ಪಾಕಿಸ್ತಾನ ಸೆಮಿಫೈನಲ್ ಹಣೆಬರಹ ನಿರ್ಧಾರವಾಗಲಿದೆ. ವ್ಯತಿರಿಕ್ತವಾಗಿ ಬಾಂಗ್ಲಾ ಹುಲಿಗಳಿಗೆ ಬಾಬರ್ ಪಡೆ ಶರಣಾದರೆ ಎಲ್ಲಾ ಲೆಕ್ಕಾಚಾರಗಳು ಅಲ್ಲಿಗೇ ಕೊನೆಗೊಳ್ಳಲಿದೆ.
ಭಾರತ ಝಿಂಬಾಬ್ವೆಯನ್ನು ಮಣಿಸಿದರೆ ಗ್ರೂಪ್-2ರ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಪಾಕಿಸ್ತಾನದ ಕಾಯುವಿಕೆ ವ್ಯರ್ಥವಾಗಲಿದೆ. ಆದರೆ ಪಾಕಿಸ್ತಾನವನ್ನು ಮಣಿಸಿದ ರೀತಿಯಲ್ಲೇ ಭಾರತವನ್ನೂ ಝಿಂಬಾಬ್ವೆ ಮಣಿಸಿ, ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಪಾಕ್ ಗೆಲುವು ಸಾಧಿಸಿದರೆ ಭಾರತವನ್ನು ಟೂರ್ನಿಯಿಂದ ಹೊರದಬ್ಬಿ ಪಾಕಿಸ್ತಾನ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಲಿದೆ.