ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಕನ್ಯತ್ವ ಪರೀಕ್ಷೆಯನ್ನು (ಟು ಫಿಂಗರ್ ಟೆಸ್ಟ್) ಸುಪ್ರೀಂ ಕೋರ್ಟ್ ಸೋಮವಾರ ನಿಷೇಧಿಸಿದ್ದು, ಅಂತಹ ಪರೀಕ್ಷೆಗಳನ್ನು ನಡೆಸುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ದುರ್ನಡತೆಗಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೇಂದ್ರ ಮತ್ತು ರಾಜ್ಯಗಳನ್ನು ಎಚ್ಚರಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ,ಅತ್ಯಾಚಾರ ಮತ್ತು ಕೊಲೆ ಅಪರಾಧಿಯನ್ನು ಖುಲಾಸೆಗೊಳಿಸಿದ ಜಾರ್ಖಂಡ್ ಹೈಕೋರ್ಟ್ನ ತೀರ್ಪನ್ನು ರದ್ದುಗೊಳಿಸಿದ್ದಲ್ಲದೆ, ವಿಚಾರಣಾ ನ್ಯಾಯಾಲಯವು ನೀಡಿದ ತೀರ್ಪನ್ನು ಎತ್ತಿಹಿಡಿಯಿತು.
2013ರಿಂದ ಪ್ರಾರಂಭವಾಗುವ ತೀರ್ಪುಗಳ ಮೂಲಕ ಕನ್ಯತ್ವ ಪರೀಕ್ಷೆಯನ್ನು ಉನ್ನತ ನ್ಯಾಯಾಲಯವು ನಿಷೇಧಿಸಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ. ಅತ್ಯಾಚಾರ ಸಂತ್ರಸ್ತೆಯ ಲೈಂಗಿಕ ಇತಿಹಾಸವನ್ನು ಖಚಿತಪಡಿಸಿಕೊಳ್ಳಲು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಎಂದು ಸ್ಥಾಪಿಸಲಾಗಿದ್ದರೂ ಸಹ, ಈ ಪರೀಕ್ಷೆಯನ್ನು ಮುಂದುವರಿಸಿರುವುದರ ಬಗ್ಗೆ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಈ ಪದ್ಧತಿ ಇಂದಿಗೂ ಪ್ರಚಲಿತದಲ್ಲಿರುವುದು ದುರದೃಷ್ಟಕರ. ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕನ್ಯತ್ವ ಪರೀಕ್ಷೆಯನ್ನು ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನ್ಯಾಯಪೀಠವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಆದೇಶಿಸಿದ್ದು, ಸಚಿವಾಲಯ ರೂಪಿಸಿದ ಮಾರ್ಗಸೂಚಿಗಳನ್ನು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.