ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ | ಪದಕ ಸುತ್ತು ಪ್ರವೇಶಿಸಿ ದಾಖಲೆ ನಿರ್ಮಿಸಿದ ಶಂಕರ್‌ ಮುತ್ತುಸಾಮಿ

Prasthutha|

ಸ್ಪೇನ್‌ನ ಸ್ಯಾಂಟಂಡರ್‌ನಲ್ಲಿ ನಡೆದ ಬಿಡಬ್ಲ್ಯು ಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮುತ್ತುಸಾಮಿ, ಫೈನಲ್‌ ಪ್ರವೇಶಿಸುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ.

- Advertisement -

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ 4ನೇ ಶ್ರೇಯಾಂಕಿತ 18 ವರ್ಷದ ಶಂಕರ್‌, ಥಾಯ್ಲೆಂಡ್‌ನ ಪಾನಿಟ್‌ಚಾಫೋನ್ ತೀರರತ್ಸಕುಲ್ ಅವರನ್ನು ನೇರ ಗೇಮ್‌ಗಳಲ್ಲಿ (21- 13, 21- 15) ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಪಂದ್ಯವು 40 ನಿಮಿಷಗಳಲ್ಲಿ ಮುಕ್ತಾಯ ಕಂಡಿತು. ಇದರೊಂದಿಗೆ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ ಕೂಟದಲ್ಲಿ ಚಿನ್ನದ ಪದಕ ಸುತ್ತು ಪ್ರವೇಶಿಸಿದ ಮೊದಲ ಭಾರತೀಯ ಪುರುಷರೆಂಬ ಕೀರ್ತಿಗೆ ಪಾತ್ರರಾದರು. 2008ರಲ್ಲಿ ಸೈನಾ ನೆಹ್ವಾಲ್‌, ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಮೊದಲ ಭಾರತೀಯ ಆಟಗಾತಿ ಎಂಬ ದಾಖಲೆ ಬರೆದಿದ್ದರು. ಹೀಗಾಗಿ ಫೈನಲ್‌ ಪ್ರವೇಶಿಸಿದ ಎರಡನೇ ಭಾರತೀಯ ಶಟ್ಲರ್‌ ಎಂಬ ದಾಖಲೆಯನ್ನು ಮುತ್ತುಸಾಮಿ ತನ್ನದಾಗಿಸಿಕೊಂಡಿದ್ದಾರೆ.

ಕೇವಲ 16 ನಿಮಿಷದಲ್ಲೇ ಮುತ್ತುಸಾಮಿ, ಮೊದಲ ಗೇಮ್‌ ಗೆದ್ದು ಮುನ್ನಡೆ ಸಾಧಿಸಿದ್ದರು. ಮಧ್ಯಂತರ ವಿರಾಮದ ವೇಳೆಗೆ 11 ಅಂಕ ಗಳಿಸಿದ್ದ ಶಂಕರ್‌ಗೆ, 9 ಅಂಕ ಗಳಿಸಿದ್ದ ಪನಿತ್ಚಾಫೊನ್‌ ನಿಕಟ ಸ್ಪರ್ಧೆ ಒಡ್ಡಿದ್ದರು. ಆದರೆ ಆ ಬಳಿಕ ಮೇಲುಗೈ ಸಾಧಿಸಿದ ಭಾರತೀಯ ಆಟಗಾರ 21- 13 ಅಂತರದಲ್ಲಿ ಸೆಟ್‌ ವಶಪಡಿಸಿಕೊಂಡರು.

- Advertisement -

 ಎರಡನೇ ಗೇಮ್‌ನ ಆರಂಭದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಕಂಡುಬಂದಿತ್ತು. 8-8ರಲ್ಲಿ, ಸಮಬಲಗೊಂಡಿದ್ದ ಗೇಮ್‌ನಲ್ಲಿ ಡಿಫೆನ್ಸ್‌ ಹಾಗೂ ತ್ವರಿತ ರಿಟರ್ನ್ಸ್‌ ಮೂಲಕ ಮುತ್ತುಸಾಮಿ ಸತತ ಆರು ಅಂಕಗಳನ್ನು ಗಳಿಸಿ 18- 12 ಅಂಕಗಳ ಮುನ್ನಡೆ ಸಾಧಿಸಿದರು. ಅಂತಿಮವಾಗಿ 24 ನಿಮಿಷಗಳಲ್ಲಿ 21- 15 ರಲ್ಲಿ ಗೇಮ್‌ ಮುಗಿಸಿ ಪಂದ್ಯವನ್ನು ಗೆದ್ದು ಸಂಭ್ರಮಿಸಿದರು.



Join Whatsapp