ಶಿವಮೊಗ್ಗ: ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಜನ ಅರ್ಧಕ್ಕೆ ಎದ್ದು ಹೋಗುತ್ತಿದ್ದಾರೆ. ಜನರ ಸಂಕಲ್ಪವೇ ಬೇರೆ ಇದೆ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನ ಸಂಕಲ್ಪ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಪ್ರಚಾರ ಮತ್ತು ಸುಳ್ಳು ಹೇಳುವುದೇ ಬಿಜೆಪಿಯವರ ಕೆಲಸ. ಭಾರತ ಐಕ್ಯತಾ ಯಾತ್ರೆಯ ಉದ್ದೇಶ ದ್ವೇಷ ರಾಜಕಾರಣದಿಂದ ಒಡೆದುಹೋಗಿರುವ ಮನಸುಗಳನ್ನು ಒಂದುಗೂಡಿಸುವುದು, ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಆದರೆ ಬಿಜೆಪಿಯವರು ರಾಹುಲ್ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಯಾತ್ರೆಯ ಬಗ್ಗೆ ತಪ್ಪು ಮಾಹಿತಿ ನೀಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗ ಬಿಜೆಪಿಗೆ ಸಂಪೂರ್ಣ ಬಹುಮತ ಇದೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಆಗಿದೆ. ಮಹಿಳಾ ಮೀಸಲಾತಿ ಬಿಲ್ ಅನ್ನು ಪಾಸ್ ಮಾಡಬೇಕಿತ್ತಲ್ವಾ? ಇನ್ನು ಯಾಕೆ ಮಾಡಿಲ್ಲ? ರಾಮುಲು ಅವರಿಗೆ ಮೀಸಲಾತಿ, ಸಂವಿಧಾನದ ಬಗ್ಗೆ ಗೊತ್ತಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದೋಕೆ ಮಾತ್ರ ಗೊತ್ತು. ಮೀಸಲಾತಿ ಹೆಚ್ಚಳವಾದರೆ ಅದರಿಂದ ಲಾಭವಾಗೋದು ಕಾಂಗ್ರೆಸ್ ಪಕ್ಷಕ್ಕೆ, ಕಾರಣ ನಾವು ಯಾವಾಗಲೂ ಮೀಸಲಾತಿಯ ಪರ ಇರುವವರು ಎಂದು ಹೇಳಿದರು.
ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಒಬ್ಬ ಜೋಕರ್, ಅವರ ಮಾತಿಗೆಲ್ಲ ಉತ್ತರ ಕೊಡುತ್ತಾ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ ಎಂದು ಹೇಳಿದರು.