ಟಿ20 ಕ್ರಿಕೆಟ್‌ | ಪ್ರಸಕ್ತ ವರ್ಷ ಅತಿ ಹೆಚ್ಚು ರನ್‌ ದಾಖಲಿಸಿದ ಸೂರ್ಯಕುಮಾರ್‌ ಯಾದವ್‌

Prasthutha|

ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾರತ, ನೆದರ್ಲ್ಯಾಂಡ್‌ ತಂಡವನ್ನು 56 ರನ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ 2 ವಿಕೆಟ್‌ ನಷ್ಟದಲ್ಲಿ 179 ರನ್‌ಗಳಿಸಿತ್ತು. ಚೇಸಿಂಗ್‌ ವೇಳೆ ನೆದರ್ಲ್ಯಾಂಡ್‌ 9 ವಿಕೆಟ್‌ ನಷ್ಟದಲ್ಲಿ 123 ರನ್‌ಗಳಿಸಲಷ್ಟೇ ಶಕ್ತವಾಯಿತು.

- Advertisement -

ಸೂಪರ್ 12 ಹಂತದ ಗ್ರೂಪ್‌ 2ರಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್‌ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಿ20 ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಮುಂದುವರಿಸಿರುವ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌, ಗುರುವಾರದ ಪಂದ್ಯದಲ್ಲಿ 25 ಎಸೆತಗಳಲ್ಲಿ 51 ರನ್‌ಗಳಿಸಿ ಅಜೇಯರಾಗುಳಿದರು. ಆ ಮೂಲಕ ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ದಾಖಲಿಸಿದ ಆಟಗಾರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. 2022ರಲ್ಲಿ ಇದುವರೆಗೂ 25 ಇನ್ನಿಂಗ್ಸ್‌ ಆಡಿರುವ ಸೂರ್ಯಕುಮಾರ್‌, ಒಟ್ಟು 867 ರನ್‌ಗಳಿಸಿದ್ದಾರೆ. ಈ ಹಾದಿಯಲ್ಲಿ ಭಾರತದ ಭರವಸೆಯ ಬ್ಯಾಟರ್‌ ಯಾದವ್‌, ಪಾಕಿಸ್ತಾನದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮುಹಮ್ಮದ್‌ ರಿಝ್ವಾನ್‌ರನ್ನು ಹಿಂದಿಕ್ಕಿದ್ದಾರೆ. ರಿಝ್ವಾನ್‌ ಇದುವರೆಗೂ 19 ಇನ್ನಿಂಗ್ಸ್‌ಗಳಿಂದ 825 ರನ್‌ಗಳಿಸಿದ್ದಾರೆ.

- Advertisement -

ಬುಧವಾರ ಐಸಿಸಿ ಪ್ರಕಟಿಸಿದ್ದ ಟಿ20 ಶ್ರೇಯಾಂಕದಲ್ಲಿ ಸೂರ್ಯಕುಮಾರ್‌ ಒಂದು ಸ್ಥಾನ ಹಿಂಬಡ್ತಿ ಪಡೆದು ಮೂರನೇ ಸ್ಥಾನಕ್ಕಿಳಿದಿದ್ದರು. ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೆ 831 ಅಂಕಗಳೊಂದಿಗೆ ಮೂರು ಸ್ಥಾನ ಜಿಗಿತ ಕಂಡು ಎರಡನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ಮುಹಮ್ಮದ್​​ ರಿಝ್ವಾನ್‌ 849 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರುವಾರಿಯಾಗಿದ್ದ ವಿರಾಟ್‌ ಕೊಹ್ಲಿ, ಟಿ20 ಶ್ರೇಯಾಂಕದಲ್ಲಿ 5 ಸ್ಥಾನ ಜಿಗಿತ ಕಾಣುವ ಮೂಲಕ 635 ಅಂಕಗಳೊಂದಿಗೆ 9ನೇ ಶ್ರೇಯಾಕ ಪಡೆದಿದ್ದಾರೆ. ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕೊಹ್ಲಿ ಏಳನೇ ಶ್ರೇಯಾಂಕವನ್ನು ಹೊಂದಿದ್ದು,  ಆಮೂಲಕ ಕ್ರಿಕೆಟ್‌ನ ಎರಡೂ ಆವೃತ್ತಿಗಳಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ.



Join Whatsapp