ಬೆಂಗಳೂರು : ರೈತರ ಬದುಕನ್ನೇ ಕಿತ್ತುಕೊಳ್ಳುವ ಮೂರು ಮಸೂದೆಗಳ ತಿದ್ದುಪಡಿ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ದೇಶದ ಅತಿ ದೊಡ್ಡ ಭೂ ಕಬಳಿಕೆ ಹಗರಣಕ್ಕೆ ಮುನ್ನುಡಿ ಬರೆದಿದೆ ಎಂದು ಅಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಮೌರ್ಯ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ರೈತರ ಜಮೀನು ಗುತ್ತಿಗೆ ಪಡೆದುಕೊಳ್ಳುವ ಕಂಪೆನಿಗಳು ನಿಧಾನಕ್ಕೆ ರೈತರ ಜಮೀನನ್ನೇ ಕಸಿಯುತ್ತವೆ. ಇದು ಇಡೀ ದೇಶದ ಭೂಮಿಯನ್ನು ಉಳ್ಳವರ ಕೈಗೆ ಕೊಡುವ ಹುನ್ನಾರ ಎಂದರು.
ಈ ದೇಶದ ಬೆನ್ನೆಲುಬಾದ ರೈತನಿಗೆ ಅವಮಾನ ಮಾಡಿರುವ ಬಿಜೆಪಿ ಸರ್ಕಾರ ಈ ಕೂಡಲೇ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಅಂಬಾನಿ, ಅದಾನಿಗಳ ಸೇವಕರಂತೆ ಕೆಲಸ ಮಾಡುತ್ತಿರುವ ನೀವು ಈ ದೇಶದ ಮಕ್ಕಳೆ, ನೀವು ದೇಶ ಭಕ್ತರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಜವಾದ ದೇಶಭಕ್ತರು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ, ನೀವು ನಮ್ಮ ಸೇವಕರು, ನಿಮಗೆ ನಮ್ಮ ಹಕ್ಕುಗಳನ್ನು ಕಿತ್ತುಕೊಳ್ಳುವ ಅಧಿಕಾರವಿಲ್ಲ ಎಂದು ಹೇಳಿದರು. ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿ ಮಾಡಲು ಹೊರಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿ ಇರಿಸಿದ ಕೇಂದ್ರ ಸರ್ಕಾರ ಧಮನಕಾರಿ ನೀತಿಯನ್ನು ಖಂಡಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರವೂ ಸಹ ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ರೈತರ ಪರವಾಗಿ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.