ಭಾರತದ ವಿದೇಶಿ ಸಂಬಂಧವನ್ನು ಕುಲಗೆಡಿಸಿದ ಟ್ರಂಪ್

Prasthutha|

-ರಮೇಶ್.ಎಸ್.ಪೆರ್ಲ

- Advertisement -

 ಇಂಡಿಯಾಸ್ ಫ್ರೆಂಡ್ ಅಮೆರಿಕಾ ಪ್ರೆಸಿಡೆಂಟ್ ಮಿಸ್ಟರ್ ಡೊಲಾಂಡ್ ಟ್ರಂಪ್. ಚುನಾವಣೆಯಲ್ಲಿ ಸೋತು ಹೋದ. ಸೋಲುವುದಕ್ಕಿಂತ ಮೊದಲು ಭಾರತ ದೇಶದ ನೆರೆಹೊರೆ ರಾಷ್ಟ್ರಗಳೊಂದಿಗೆ ಹೊಂದಿದ್ದ ಉತ್ತಮ ಸಂಬಂಧವನ್ನು ಸಂಪೂರ್ಣ ಕೆಡಿಸಿಹಾಕಿ ಹೋಗಿದ್ದಾನೆ. ಇದರಲ್ಲಿ ನಮ್ಮವರ ಪಾತ್ರ ಕೂಡ ಇದೆ. ಆದರೆ, ಭಾರತ ದೇಶಕ್ಕಾದ ಅನ್ಯಾಯವನ್ನು ಸರಿಪಡಿಸಲು ಹಲವು ದಶಕಗಳೇಬೇಕಾದವು.

 ಅಮೆರಿಕಾ ಪ್ರೆಸಿಡೆಂಟ್ ಭಾರತ ಭೇಟಿಗಾಗಿ ನಮ್ಮ ಸರಕಾರ ಎಷ್ಟೋಂದು ಕೋಟಿ ರೂಪಾಯಿ ಖರ್ಚು ಮಾಡಿತ್ತು. ಅದರ ಬದಲಿಗೆ ಆತ ಹೇಳಿದ್ದೇನು. ಇಂಡಿಯಾ ಇಸ್ ಫೀಲ್ದಿ, ಕೊಳಕು ಭಾರತ. ನಮ್ಮಲ್ಲಿ ಪರಿಸರ ಮಾಲಿನ್ಯ ಇದೆ, ಇತ್ಯಾದಿ ಅದು ಹಾಗಿರಲಿ. ಅದಕ್ಕಿಂತಲೂ ಹೆಚ್ಚು ಅನ್ಯಾಯ ಆಗಿರುವುದು ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸಂಬಂಧ ಕುಲಗೆಟ್ಟು ಹೋಗಿದೆ. ಇದರಿಂದ ಕೇವಲ ವಾಣಿಜ್ಯ, ವಿದೇಶಿ ವಿನಿಮಯ ಮಾತ್ರವಲ್ಲದೆ ರಕ್ಷಣಾ ವಿಚಾರದಲ್ಲಿ ಭಾರತಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಚೀನಾ ದೇಶದ ಕೈ ಮೇಲಾಗಿದೆ.

- Advertisement -

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ವಿಚಾರ ಹಾಗಿರಲಿ, ಸುದೀರ್ಘ ಇತಿಹಾಸ ಇರುವ ನೇಪಾಳ-ಭಾರತ ಸಂಬಂಧ ಹಳಿಸಿದೆ. ಇದು ನೋಟ್ ಬಂದ್ ಮೂಲಕ ಆರಂಭ ಆಗಿತ್ತು. ನೇಪಾಳ ದೇಶದಲ್ಲಿ ಭಾರತೀಯ ಕರೆನ್ಸಿ ಚಲಾವಣೆಯಲ್ಲಿತ್ತು. ಭಾರತದಲ್ಲಿ ನೋಟ್ ಬಂದ್ ಆದ ಮೇಲೆ ಅವರಿಗೂ ಸಮಸ್ಯೆ ಆಗಿತ್ತು. ಭಾರತೀಯ ಕರೆನ್ಸಿಯನ್ನು ಬ್ಯಾನ್ ಮಾಡಿದ್ದಾರೆ.

ಭಾರತವು ಚೀನಾ ಗಡಿ ತನಕ ನೇಪಾಳ ದೇಶದಲ್ಲಿ ಲಿಪೋಲೇಖ್ ಹೆದ್ದಾರಿ ನಿರ್ಮಾಣ ಮಾಡಿತ್ತು. ಇದರಿಂದ ಗಡಿ ಪ್ರದೇಶದಲ್ಲಿ ಇರುವ ಭಾರತೀಯ ಮೂಲದವರಿಗೆ ಮತ್ತು ವಾಣಿಜ್ಯ ಚಟುವಟಿಕೆಗೆ ಅನುಕೂಲ ಆಗುತ್ತದೆ. ಸ್ವಾರಸ್ಯವೇನೆಂದರೆ, ಈ ಹೆದ್ದಾರಿಯ ಉದ್ಘಾಟನೆ ಆದ ಕೂಡಲೇ ನೇಪಾಳವು ಭಾರತದೊಂದಿಗೆ ಜಗಳಕ್ಕಿಳಿಯಿತು. ಇದರ ಹಿಂದಿರುವುದೇ ಚೀನಾ ದೇಶ. ಸಣ್ಣ ಮಟ್ಟಿನ ತಿಕ್ಕಾಟ ಆರಂಭವಾದಾಗ ಚೀನಾ ಮಧ್ಯಪ್ರವೇಶ ಮಾಡಿ ನೇಪಾಳದ ರೈಲ್ವೇ ಯೋಜನೆಗೆ ಬಂಡವಾಳ ಹೂಡಿಕೆ ಮಾಡಿದೆ. ನೇಪಾಳದೊಂದಿಗೆ ಮಾತುಕತೆ ನಡೆಸಿ ಸರಿಪಡಿಬಹುದಿತ್ತು. ನೇಪಾಳ ಸರಕಾರ ಮಾತುಕತೆಗೆ ಮುಂದಾದರು ಭಾರತ ಸರಕಾರ ಮಾತ್ರ ಚುನಾವಣೆಯಲ್ಲಿ ಗೆಲ್ಲುವುದು ಮತ್ತು ಶಾಸಕರ ಖರೀದಿಯಲ್ಲೇ ಬ್ಯುಸಿಯಾಗಿತ್ತು. ದೇಶದ ಭದ್ರತೆ ದೃಷ್ಟಿಯಿಂದ ನೇಪಾಳದೊಂದಿಗೆ ಭಾರತ ಉತ್ತಮ ಸಂಬಂಧ ಹೊಂದಿರುವ ಅಗತ್ಯ ಇದೆ. ನಮ್ಮ ದೇಶಭಕ್ತ ಸರಕಾರಕ್ಕೆ ಮಾತ್ರ ಆದ್ಯತೆ ಇಲ್ಲ. ನೇಪಾಳದ ವಿದೇಶಾಂಗ ವ್ಯವಹಾರ ಸಚಿವರು ಮಾತುಕತೆಗೆ ಆಹ್ವಾನಿಸಿದರು ನಮ್ಮವರು ಕಡೆಗಣಿಸಿದ್ದಾರೆ.

ಬಾಂಗ್ಲಾ ದೇಶ ಕೂಡ ಈಗ ಚೀನಾ ಕಡೆಗೆ ವಾಲಿದೆ. ಜಿಡಿಪಿ ಪ್ರಗತಿ ವಿಚಾರದಲ್ಲಿ ಸುದ್ದಿಯಲ್ಲಿರುವ ಬಾಂಗ್ಲಾ ದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ವಿಚಾರದಲ್ಲಿ ಚಿಕ್ಕ ವಿವಾದವಿದೆ. ಹಳೆಯದಾದ ತೀಸ್ತಾ ನದಿ ವಿವಾದ ಬಗೆಹರಿಸಲು 21ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲ ಯತ್ನ ನಡೆಸಿದ್ದರು. ಇಲ್ಲಿ ಕೂಡ ಮಧ್ಯಪ್ರವೇಶ ಮಾಡಿರುವ ಚೀನಾ ಸರಕಾರವು ತೀಸ್ತಾ ನದಿ ನಿರ್ವಹಣೆ ಯೋಜನೆಗೆ ಒಂದು ಬಿಲಿಯ ಡಾಲರ್ ಸಾಲವನ್ನು ಬಾಂಗ್ಲಾ ದೇಶಕ್ಕ ನೀಡಿದೆ. ಅಷ್ಟು ಮಾತ್ರವಲ್ಲದೆ, ಚೀನಾ ದೇಶಕ್ಕೆ ಬಾಂಗ್ಲಾ ದೇಶದಿಂದ ರಫ್ತು ಮಾಡುವ 85 ವಸ್ತುಗಳಿಗೆ ಸುಂಕ ವಿನಾಯತಿ ನೀಡಿದೆ. ಬಾಂಗ್ಲಾ ದೇಶದ ಉದ್ಯಮಿಗಳು ಚೀನಾ ದೇಶಕ್ಕೆ ನಿರಂತಕವಾಗಿ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬಹುದಾಗಿದೆ.

ನಮ್ಮ ಮತ್ತೊಂದು ಪ್ರಮುಖ ಮಿತ್ರ ರಾಷ್ಟ್ರ ಶ್ರೀಲಂಕಾ ಇದೀಗ ಚೀನಾ ದೇಶದ ಸಾಲದ ಶೂಲಕ್ಕೆ ಸಿಲುಕಿದೆ. ಶ್ರೀಲಂಕಾ ದೇಶವು ತನ್ನ ವಿದೇಶಿ ನೀತಿಯಲ್ಲಿ ಇಂಡಿಯ ಫಸ್ಟ್ ನಿಲುವನ್ನು ಹೊಂದಿತ್ತು. ಆದರೆ, ತನ್ನ ತಪ್ಪುನಡೆಯಿಂದಾಗಿ ಚೀನಾದ ಸಾಲದ ಸುಳಿಗೆ ಸಿಲುಕಿದೆ. ಇದರಿಂದಾಗಿ, ದೇಶದ ಭದ್ರತೆ ವಿಚಾರದಲ್ಲಿ ಭಾರತಕ್ಕೆ ಗಂಭೀರ ದುಷ್ಪರಿಣಾಮ ಆಗುವ ಸಾಧ್ಯತೆ ಇದೆ.

ಶ್ರೀಲಂಕಾ ದ್ವೀಪ ರಾಷ್ಟ್ರದ ಅತ್ಯಂತ ಕೆಳಗಿನ ತುದಿಯಲ್ಲಿ ಇರುವ ಹಂಬನ್ ತೋಟ ಬಂದರನ್ನು 9 ವರ್ಷಗಳ ಕಾಲ ಚೀನಾ ದೇಶಕ್ಕೆ ನೀಡಿದೆ. ಕಾರಣವೇನೆಂದರೆ, ಆರ್ಥಿಕ ದುಸ್ಥಿತಿಯಲ್ಲಿದ್ದ ಶ್ರೀಲಂಕಾಕ್ಕೆ ಚೀನಾ ಸರಕಾರ ಸಾಲ ನೀಡಿದೆ. ಆರ್ಥಿಕ ನೆರವು ನೀಡಿರುವುದರ ಫಲವಾಗಿ 9 ವರ್ಷಗಳ ಕಾಲ ಆಯಕಟ್ಟಿನ ಸಮುದ್ರ ತೀರದಲ್ಲಿ ಇರುವ ಜಲಬಂದರು ಚೀನಾ ದೇಶದ ನಿಯಂತ್ರಣದಲ್ಲಿ ಇರುತ್ತದೆ. ಮಾತ್ರವಲ್ಲದೆ, 1.0 ಎಕರೆ ವಿಸ್ತೀರ್ಣ ಜಮೀನು ಕೂಡ ಚೀನಾ ದೇಶದ ನಿಯಂತ್ರಣದಲ್ಲಿ ಇರುತ್ತದೆ. ಇದು ಭಾರತದ ಗಡಿಯಿಂದ ಕೆಲವು ನೂರು ನಾಟಿಕಲ್ ಮೈಲ್ ದೂರದಲ್ಲಿಯಷ್ಟೇ. ಭಾರತದ ಸಾಗರ ವಾಣಿಜ್ಯ ಮತ್ತು ರಕ್ಷಣಾ ಸರಹದ್ದಿಗೆ ಹೊಂದಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಭಾರತಕ್ಕೆ ಮಾರಕವಾಗುವ ಆತಂಕವಿದೆ.

 ಹಾಗಾದರೆ ಭಾರತ ಯಾಕೆ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲಿಲ್ಲ ಎಂಬ ಪ್ರಶ್ನೆ ಬರುತ್ತದೆ. ಅಂದಿನ ಮಹಿಂದ ರಾಜಪಕ್ಷೆ ಸರಕಾರ ಆರ್ಥಿಕ ನೆರವಿಗಾಗಿ ಭಾರತದತ್ತ ಕೈಚಾಚಿತ್ತು. ಭಾರತ ಸರಕಾರ ನೆರವು ನೀಡಲು ನಿರಾಕರಿಸಿದೆ. ಇದೇ ಸಂದರ್ಭದಲ್ಲಿ ಚೀನಾ ದೇಶದ ವಾಣಿಜ್ಯ ಸಂಸ್ಥೆಗಳ ಮೂಲಕ ಶ್ರೀಲಂಕಾಕ್ಕೆ ನೆರವು ಹರಿದು ಬಂದಿದೆ. ಅನಂತರ ಚೀನಾ ದೇಶದ ಕಮ್ಯೂನಿಸ್ಟ್ ಮುಖಂಡರು ಶ್ರೀಲಂಕಾಕ್ಕೆ ಸಹಾಯ ನೀಡಿದ್ದಾರೆ. ಆದರೆ, ಭಾರತದ ಭದ್ರತೆಯ ಹಿತದೃಷ್ಟಿಯಿಂದ ಚೀನಾ ದೇಶದ ಚಲನವಲನಗಳನ್ನು, ಚೀನಾ -ಶ್ರೀಲಂಕಾ ವ್ಯವಹಾರಗಳ ಬಗ್ಗೆ ಭಾರತ ಸರಕಾರ ಹದ್ದಿನ ಕಣ್ಣಿಡಬೇಕಾಗಿತ್ತು. ಆ ಕೆಲಸ ನಮ್ಮ ಕಡೆಯಿಂದ ಆಗಲಿಲ್ಲ. ಚೀನಾ ದೇಶ ಮತ್ತೊಂದು ಬಂದರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

 ಮೇಲೆ ಚರ್ಚಿಸಿರುವ ವಿಚಾರಗಳಿಗಿಂತಲೂ ಹೆಚ್ಚು ಗಂಭೀರವಾದ ಮತ್ತು ಗಮನಾರ್ಹವಾಗಿರುವುದು ಇರಾನ್ –ಇಂಡಿಯ ಸಂಬಂಧ. ಇರಾನ್ ಭಾರತ ಸಂಬಂಧಕ್ಕೆ ಹಲವು ದಶಕಗಳ ಇತಿಹಾಸವಿದೆ. ಕುದುರೆಮುಖ ಅದಿರು ಕಂಪೆನಿಯಿಂದ ತೊಡಗಿ ತೈಲ ಅಮದು ತನಕ ಪರಸ್ಪರ ಸಹಯೋಗದ ವ್ಯವಹಾರಗಳಿವೆ. ಇರಾಕಿನ ಅಂದಿನ ಅಧ್ಯಕ್ಷ ಸದ್ದಾಂ ಹುಸೇನ್ ಉಚಿತವಾಗಿ ಇಂಧನ ನೀಡುತ್ತೇನೆ ಎಂದಾಗಲೂ ಭಾರತವು ಇರಾನ್ ಜತೆಗಿನ ಸಂಬಂಧ ಬಿಡಲಿಲ್ಲ. ಇದೇ ಕಾರಣಕ್ಕಾಗಿ ಇರಾನ್ ದೇಶದಲ್ಲಿ ಚಾಬಾರ್ ಜಲಬಂದರು ಮತ್ತು ಅದಕ್ಕೆ ಪೂರಕವಾದ ಜೆಹದಾನ್-ಚಾಬಾರ್ ರೈಲ್ವೇ ಯೋಜನೆಗಳು ಭಾರತದ ಪಾಲುದಾರಿಕೆಯಲ್ಲಿ ಅನುಷ್ಠಾನದಲ್ಲಿತ್ತು. ಈ ಶತಮೂರ್ಖರಿಂದ ಎಲ್ಲ ಕೆಟ್ಟು ಹೋಯ್ತು. ಅದರಲ್ಲೂ, ಅಮೆರಿಕಾ ಮತ್ತು ಇರಾನ್ ದೇಶಗಳ ಆಂತರಿಕ ಕಲಹಗಳಿಗೆ ಭಾರತ ಬೆಲೆ ತೆರಬೇಕಾಯಿತು. ಏಕೆಂದರೆ, ದೇಶದ ಮೇಲೆ ಕಿಂಚಿತ್ತು ಪ್ರೀತಿ ಇಲ್ಲದ ಇಲ್ಲಿನ ಆಡಳಿತಗಾರ ದೇಶದ್ರೋಹಿ ನೀತಿಯಿಂದಾಗಿ.

 20ರಲ್ಲಿ ಆರಂಭವಾದ ಚಾಬಾರ್ ಬಂದರು ಯೋಜನೆ ಅಂತಿಮ ಹಂತದಲ್ಲಿದೆ. ಬಹುದೊಡ್ಡ ಬಂಡವಾಳ ಅಗತ್ಯವಿರುವ ಈ ಬಂದರು ಯೋಜನೆಗೆ ಭಾರತ ಸಹಯೋಗ ನೀಡಲು ಬಹಳಷ್ಟು ಕಾರಣಗಳಿವೆ. ಅದರಲ್ಲಿ ಮಹತ್ವವಾದದು ಭದ್ರತಾ ಕಾರಣ. ಸನಿಹದ ಪಾಕಿಸ್ತಾನದ ಗ್ವೋದಾರ್ ಬಂದರು ಯೋಜನೆಯಲ್ಲಿ ಚೀನಾ ಬಂಡವಾಳ ಹೂಡಿಕೆ ಮಾಡಿದೆ. ನಿಧಾನವಾಗಿ ಗ್ವೋದಾರ್ ಪೋರ್ಟ್ ನಿಯಂತ್ರಣ ಚೀನಾ ದೇಶದ ಕೈಗೆ ಬರುವುದು ಬಹುತೇಕ ಖಚಿತ. ರಕ್ಷಣಾತ್ಮಕ ದೃಷ್ಟಿಯಿಂದ ಮಾತ್ರವಲ್ಲದೆ ವಾಣಿಜ್ಯ ಕಾರಣಕ್ಕಾಗಿ ಕೂಡ ಭಾರತಕ್ಕೆ ಚಾಬಾರ್ ಪೋರ್ಟ್ ಪ್ರಾಜೆಕ್ಟ್ ಮಹತ್ವಹೊಂದಿದೆ. ಚಾಬಾರ್ ಅಂದರೆ ನಾಲ್ಕು ಋತುಗಳು ಎಂಬರ್ಥವಿದೆ. ಏಕೆಂದರೆ, ಅಲ್ಲಿನ ಆರೋಗ್ಯ. ಪೂರ್ಣ ಹವಾಮಾನ ಇದಕ್ಕೆ ಕಾರಣ. ಚಾಬಾರ್ ಬಂದರಿಗೆ ಪೂರಕವಾಗಿ ಜೆಹದಾನ್ ರೈಲ್ವೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಸುಮಾರು 68ಕಿಲೋ ಮೀಟರ್ ಉದ್ದ ಈ ರೈಲ್ವೇ ಯೋಜನೆಯಲ್ಲಿ ಇರಾನ್ ದೇಶದೊಂದಿಗೆ ಭಾರತ ಸಹಯೋಗ ಹೊಂದಿತ್ತು.

 ಇರಾನ್ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ರೈಲ್ವೇ ಯೋಜನೆಗೆ ಭಾರತ ಬೆಂಬಲ ನೀಡಲಿದ್ದು, ಆ ಮೂಲಕ ಚಾಬಾರ್ ಬಂದರಿನ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂದು ಭಾಷಣ ಮಾಡಿದ್ದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಕಾರದ ಹಲವು ಜನವಿರೋಧ ವಿದೇಶಾಂಗ ನೀತಿಯಿಂದಾಗಿ ಭಾರತ ಬೆಪ್ಪುತಕ್ಕಡಿಯಂತಾಗಿದೆ.

 ಇರಾನ್ ದೇಶದೊಂದಿಗೆ ಯಾವುದೇ ವ್ಯವಹಾರ ನಡೆಸದಂತೆ ಟ್ರಂಪ್ ಆಡಳಿತ ದಿಗ್ಭಂಧನ ಹೇರಿತು. ಜೆಹದಾನ್-ಚಾಬಾರ್ ರೈಲ್ವೇ ಯೋಜನೆಗೆ ಭಾರತ ಸರಕಾರ ಹಣ ನೀಡಲಿಲ್ಲ. ಇತ್ತೀಚೆಗೆ ಹೇಳಿಕೆ ನೀಡಿರುವ ಇರಾನ್ ದೇಶ ವಿದೇಶಾಂಗ ಸಚಿವರು, ಭಾರತ ನೆರವು ನೀಡದಿದ್ದರೂ ತೊಂದರೆ ಇಲ್ಲ. ನಾವು ಕಾಮಗಾರಿ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ. ಇದರರ್ಥ ಜೆಹದಾನ್-ಚಾಬಾರ್ ರೈಲ್ವೇ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ.

 ಈ ಮಧ್ಯೆ, ಚಾಬಾರ್ ಪೋರ್ಟಿಗೆ ಚೀನಾ ದೇಶ ಕೈ ಹಾಕಿದೆ. ಟ್ರಂಪ್ ಮಾಡಿರುವ ಕಿತಾಪತಿಯಿಂದಾಗಿ ಮತ್ತು ನಮ್ಮ ದೇಶದ ದೂರದೃಷ್ಟಿ ನಾಯಕತ್ವದ ಕೊರತೆ ಇದಕ್ಕೆ ಕಾರಣ. ಚಾಬಾರ್ ಪೋರ್ಟ್ ವಿಚಾರದಲ್ಲಿ ಹಿಂದಿನಿಂದಲೂ ಟ್ರಂಪ್ ಸರಕಾರ ಕಿರಿಕಿರಿ ಮಾಡುತ್ತಲೇ ಇತ್ತು. ಜಪಾನ್ ದೇಶದ ಬ್ಯಾಂಕ್ ಸಾಲ ನೀಡುವುದಕ್ಕೆ ಕೂಡ ಅಡ್ಡಗಾಲು ಹಾಕಲಾಗಿತ್ತು. ಈಗ ಚೀನಾ ದೇಶ ಚಾಬಾರ್ ಪೋರ್ಟ್ ಏರಿಯಾದ ಬಹುದೊಡ್ಡ ಪ್ರದೇಶದಲ್ಲಿ ತನ್ನದೇ ಆದ ಅಭಿವೃದ್ಧಿ ಪಡೆಸಲು ಆರಂಭಿಸಿದೆ. ಚೀನಾ ದೇಶದ ಅತ್ಯಂತ ಆಯಕಟ್ಟಿನ ವಿಶಾಲವಾದ ಪ್ರದೇಶ ದೊರಕಿದೆ. ಇದರೊಂದಿಗೆ ವಿಶಾಲವಾದ ಕಂಟೈನರ್ ಟರ್ಮಿನಲ್ ಪ್ರದೇಶ ಕೂಡ ಚೀನಾ ಸರಕಾರದ ನಿಯಂತ್ರಣಕ್ಕೆ ಬಂದಿದೆ. ಇದರಿಂದಾಗಿ ಸಣ್ಣ ಪ್ರಮಾಣದ ಪ್ರದೇಶಗಳಷ್ಟೇ ಭಾರತದ ಪಾಲಿಗೆ ಉಳಿಕೆಯಾಗಿದೆ. ಬಹುದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿ, ಇತ್ತ ರೈಲ್ವೇ ಯೋಜನೆಯೂ ಆಗದಿದ್ದರೆ ಭಾರತಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇದಕ್ಕೆಲ್ಲ ಕಾರಣ ಇಂಡಿಯಾಸ್ ಫ್ರೆಂಡ್ ಅಮೆರಿಕಾ ಪ್ರೆಸಿಡೆಂಟ್ ಮಿಸ್ಟರ್ ಡೊಲಾಂಡ್ ಟ್ರಂಪ್.. ಮತ್ತು ಟ್ರಂಪ್‌ನ ಭಾರತ ಮಿತ್ರ.

Join Whatsapp