ಮಧ್ಯಪ್ರದೇಶ: ಪೆಟ್ರೋಲ್ ಪಂಪ್ ನಲ್ಲಿ ಸಿಗರೇಟ್ ಸೇದುವುದನ್ನು ತಡೆದ ಕಾರಣ, ಐವರು ಯುವಕರ ಗುಂಪೊಂದು ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ದೀಪಾವಳಿಯ ಮಧ್ಯರಾತ್ರಿಯಲ್ಲಿ ನಡೆದಿದೆ.
ಭೋಪಾಲ್ ರಸ್ತೆಯ ಜೆಟ್ಪುರ ಬಳಿಯ ಸೂರ್ಯಾಂಶ್ ಸೇಲ್ಸ್ ಪೆಟ್ರೋಲ್ ಪಂಪ್ ನಲ್ಲಿ ಈ ಘಟನೆ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೆಟ್ರೋಲ್ ಹಾಕಿಸಿಕೊಳ್ಳಲು ಐದು ಮಂದಿಯ ಯುವಕರ ಗುಂಪೊಂದು ಪೆಟ್ರೋಲ್ ಪಂಪ್ ಗೆ ಬಂದಿದ್ದು, ಅವರಲ್ಲಿ ಒಬ್ಬ ಸಿಗರೇಟ್ ಹೊತ್ತಿಸಲು ಮುಂದಾದಾಗ , ರಾಹುಲ್ ಸಿಂಗ್ ಎಂಬ ಪೆಟ್ರೋಲ್ ಬಂಕ್ ಸಿಬ್ಬಂದಿಯು ಅದನ್ನು ತಡೆದಿದ್ದಾನೆ ಎನ್ನಲಾಗಿದೆ.
ಆ ಬಳಿಕ ಯುವಕರ ಮತ್ತು ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿದ್ದು , ಮದ್ಯಪ್ರವೇಶೀಸಿದ ಪಂಪ್ ನ ಮತ್ತೊಬ್ಬ ಸಿಬ್ಬಂದಿ ಜೋಜನ್ ಸಿಂಗ್ ರಜಪೂತ್ ಹಾಗೂ ರಾಹುಲ್ ಇಬ್ಬರಿಗೂ ಯುವಕರು ಚೂರಿ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ರಜಪೂತ್ ಸ್ಥಳೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆ, ರಾಹುಲ್ ಸಿಂಗ್ ನನ್ನು ಚಿಕಿತ್ಸೆಗಾಗಿ ಇಂದೋರ್ಗೆ ಸ್ಥಳಾಂತರಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್ಪಿ) ಮಂಜೀತ್ ಸಿಂಗ್ ಚಾವ್ಲಾ ತಿಳಿಸಿದ್ದಾರೆ.
ಆರೋಪಿಗಳನ್ನು ಸಮೀರ್, ಫೈಜಾನ್, ಫಿರೋಜ್, ಜಾಫರ್ ಮತ್ತು ಇರ್ಷಾದ್ ಎಂದು ಗುರುತಿಸಲಾಗಿದೆ ಎಂದು ಚಾವ್ಲಾ ತಿಳಿಸಿದ್ದಾರೆ.
ಆರೋಪಿಗಳ ಮನೆಗಳು ಮತ್ತು ಅವರು ನಡೆಸುತ್ತಿರುವ ಉಪಾಹಾರ ಗೃಹವನ್ನು ನೆಲಸಮಗೊಳಿಸುವಂತೆ ಸರಕಾರ ಆದೇಶಿಸಿದೆ. ಸ್ಥಳೀಯ ಆಡಳಿತವು ಇದು ಅನಧಿಕೃತ ಕಟ್ಟಡ ಎಂದು ಹೇಳಿ ಉಪಾಹಾರ ಗೃಹವನ್ನು ರಾತ್ರೋರಾತ್ರಿ ನೆಲಸಮಗೊಳಿಸಿದ್ದು, ಆರೋಪಿಗಳ ಮನೆಗಳನ್ನು ನೆಲಸಮ ಮಾಡಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.