ಬೆಂಗಳೂರು: ರಾಜ್ಯದಲ್ಲಿ ಹಬ್ಬಹರಿದಿನಗಳ ಸಂಧರ್ಭದಲ್ಲಿ ಬಸ್ ಪ್ರಯಾಣ ದರ ದುಬಾರಿ ಮಾಡಿ ಪ್ರಯಾಣಿಕರನ್ನು ಲೂಟಿ ಮಾಡುವ ದಂಧೆಗೆ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಿದ್ದು, ಈ ಬಗ್ಗೆ ಕಾರ್ಯಾಚರಣೆ ನಡೆಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಲು ಸಾಲು ರಜೆಗಳಿರುವುದರಿಂದ ಖಾಸಗಿ ಬಸ್ನಲ್ಲಿ ಪ್ರಯಾಣ ಮಾಡುವ ಜನರಿಂದ ಮೂರರಿಂದ ನಾಲ್ಕು ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿರುವ ದೂರುಗಳನ್ನು ಆಧರಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
‘ಬೆಂಗಳೂರಿನಲ್ಲೇ 450 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರಾಜ್ಯದ ವಿವಿಧೆಡೆಯೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟಾರೆ ಒಂದು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದಾರೆ. ಪ್ರಯಾಣ ದರ ಹೆಚ್ಚಳವಷ್ಟೇ ಅಲ್ಲದೇ, ದಾಖಲೆಗಳು ಸಮರ್ಪಕವಾಗಿ ಇಲ್ಲದ ಪ್ರಕರಣಗಳೂ ಇದರಲ್ಲಿ ಸೇರಿವೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ವಿವರಿಸಿದರು.