ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ: ಅ.28ರಂದು ಪುತ್ತೂರಿನಲ್ಲಿ ಬೃಹತ್ ಜಾಥಾ, ಪ್ರತಿಭಟನೆ

Prasthutha|

ಪುತ್ತೂರು: ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನವನ್ನು ಖಂಡಿಸಿ ಅಕ್ಟೋಬರ್ 28ರಂದು ಶುಕ್ರವಾರ ಪುತ್ತೂರಿನಲ್ಲಿ ಬೃಹತ್ ಜಾಥಾ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ತೀರ್ಮಾನಿಸಿದೆ.

- Advertisement -


ಹಲ್ಲೆ ಘಟನೆಯನ್ನು ಖಂಡಿಸಿ ಸೋಮವಾರ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.


ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯ. ಫ್ಯಾಶಿಸ್ಟ್ ಗೂಂಡಾಗಳಿಂದ ನಡೆದ ಕೊಲೆ ಯತ್ನ, ದರೋಡೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ವ್ಯಾಪಾರಿಗಳನ್ನು ಕೊಲ್ಲಲು ಯತ್ನಿಸಿದ್ದ ಆರೋಪಿಗಳ ವಿರುದ್ಧ ಕಠಿಣ ಕಲಂಗಳಡಿ ಪ್ರಕರಣ ದಾಖಲಿಸಬೇಕಾದ ಪೊಲೀಸರು ನಿರ್ಲಕ್ಷ್ಯ ವಹಿಸಿ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಇದೇ ಬರುವ ಶುಕ್ರವಾರ ಮೂರು ಗಂಟೆಗೆ ದರ್ಬೆ ಜಂಕ್ಷನ್ ನಿಂದ ಪುತ್ತೂರು ಎಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.

- Advertisement -


ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕೊಲೆಯತ್ನ ಪ್ರಕರಣ ದಾಖಲಿಸಬೇಕು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮಕೈಗೊಳ್ಳಬೇಕು. ಮನವಿ ಸ್ವೀಕರಿಸಲು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.

Join Whatsapp