ರಾಯಚೂರು: ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮಾಜಿ ಸೈನಿಕರೊಂದಿಗೆ ಪಾದಯಾತ್ರೆ ನಡೆಸಿ ಎಲ್ಲರ ಗಮನ ಸೆಳೆದರು.
ಇಂದು ಬೆಳಗ್ಗೆ ಜಿಲ್ಲೆಯ ಯರಗೇರಾದಲ್ಲಿ ಆರಂಭವಾದ 45ನೇ ದಿನದ ಯಾತ್ರೆ ಸಂಜೆ ರಾಯಚೂರು ನಗರದ ಬಸವೇಶ್ವರ ವೃತ್ತದ ಮೈದಾನದಲ್ಲಿ ಮುಕ್ತಾಯಗೊಂಡಿತು. ಮಾಜಿ ಸೈನಿಕರ ರಾಯಚೂರು ಜಿಲ್ಲಾ ಸಂಘದ ಸದಸ್ಯರು ರಾಷ್ಟ್ರಧ್ವಜ ಹಿಡಿದು ಗಾಂಧಿಯವರೊಂದಿಗೆ ಉತ್ಸಾಹದೊಂದಿಗೆ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.
ಮಾಜಿ ಸೈನಿಕರೊಂದಿಗೆ ಓಡಿರುವ ಸಣ್ಣ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ , ಸೈನಿಕರನ್ನು ದೇಶದ ಗಡಿ ದೇಶದ ಭದ್ರತೆ ಇಂದು ಇವರಿಂದ ಸುರಕ್ಷಿತವಾಗಿದೆ. ಇವರು ದೇಶದ ರಕ್ಷಾ ಕವಚದಂತೆ. ದೇಶಾಭಿಮಾನಕ್ಕೆ ಇವರೇ ಸ್ಫೂರ್ತಿ. ಜೈ ಜವಾನ್! ಜೈ ಹಿಂದ್! ಎಂದು ಬಣ್ಣಿಸಿದೆ.
ಶುಕ್ರವಾರ ಬೆಳಗ್ಗೆ ರಾಯಚೂರು ಗಡಿಭಾಗದ ಗಿಲ್ಲೇಸುಗೂರು ಬಳಿ ರಾಜ್ಯವನ್ನು ಪ್ರವೇಶಿಸಿದ ಯಾತ್ರೆಯು ಜಿಲ್ಲೆಯ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಸಂಚರಿಸಿ ಅಕ್ಟೋಬರ್ 23 ರಂದು ನೆರೆಯ ತೆಲಂಗಾಣವನ್ನು ಪ್ರವೇಶಿಸಲಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಇಂದು ಗಾಂಧಿ ಜೊತೆಗೆ ಮೆರವಣಿಗೆಯಲ್ಲಿ ಭಾಗಿಯಾದರು.