ನವದೆಹಲಿ : ಇತ್ತೀಚೆಗೆ ದೇಶದ ವಿವಿಧ ಭಾಗಗಳಲ್ಲಿ ಪಾಪ್ಯುಲರ್ ಫ್ರಂಟ್ ನಾಯಕರ ನಿವಾಸಗಳ ಮೇಲೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಈಡಿ) ನಡೆಸಿರುವ ದಾಳಿ ಮತ್ತು ಶೋಧನೆಗಳು ಏಜೆನ್ಸಿಯು ಆರೆಸ್ಸೆಸ್ ನ ಅಸ್ತ್ರವಾಗಿ ಕಾರ್ಯಾಚರಿಸುತ್ತಿದೆ ವಿನ: ಸ್ವಂತಂತ್ರವಾಗಿಲ್ಲ ಎನ್ನುವುದನ್ನು ತೋರಿಸುತ್ತದೆ. ಆರೆಸ್ಸೆಸ್ ನ ಜನವಿರೋಧಿ ಸಿದ್ಧಾಂತದ ವಿರುದ್ಧದ ರಾಜಿಯಿಲ್ಲದ ನಿಲುವಿನ ಕಾರಣಕ್ಕಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬೇಟೆಯಾಡಲಾಗುತ್ತಿದೆ ಎಂದು ದೇಶದ ಜನತೆ ಅರಿತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಾಕಾರಿ ಸಮಿತಿ ಹೇಳಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಮೂಲೆಗೆ ತಳ್ಳಲ್ಪಟ್ಟ ಮುಸ್ಲಿಮ್ ಸಮುದಾಯದ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸುವ ಜನಪರ ಸಂಘಟನೆಯಾಗಿದೆ. ಸಾರ್ವಜನಿಕರ ದೇಣಿಗೆಯನ್ನು ಆಧರಿಸಿರುವ ಸಂಘಟನೆಯಾಗಿ ಅದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಸರಕಾರಿ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುತ್ತಿದೆ. ಆರೆಸ್ಸೆಸ್ ಮತ್ತು ಅದರ ರಾಜಕೀಯ ಅಂಗಸಂಘಟನೆಯಾಗಿರುವ ಬಿಜೆಪಿಯ ವಿಭಜನಕಾರಿ ಮತ್ತು ಕೋಮುವಾದಿ ಅಜೆಂಡಾದ ವಿರುದ್ಧದ ಧ್ವನಿಯನ್ನು ಅಡಗಿಸುವ ಮತ್ತು ದಮನಿಸುವ ಏಜೆನ್ಸಿಯಾಗಿ ಈಡಿ ಬದಲಾಗಿರುವುದು, ಅದರ ಆಯ್ದ ದುರ್ಬಳಕೆಯಿಂದ ಸ್ಪಷ್ಟವಾಗುತ್ತದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಅತ್ಯಂತ ಕನಿಷ್ಠ ಹಣಕಾಸಿನ ಮೂಲ ಮತ್ತು ವ್ಯವಹಾರಗಳನ್ನು ಹೊಂದಿರುವ ಗುಂಪುಗಳ ಹಿಂದೆ ಈಡಿ ಮತ್ತು ಇತರ ತನಿಖಾ ಏಜೆನ್ಸಿಗಳು ಓಡುತ್ತಿವೆ. ಆದರೆ ಆರೆಸ್ಸೆಸ್ ಹಿತಾಸಕ್ತಿಯ ಪರವಾಗಿರುವ ದೊಡ್ಡ ಕಾರ್ಪೊರೇಟ್ ಗಳು, ರಾಜಕೀಯ ಗುಂಪುಗಳು ಮತ್ತು ಎನ್.ಜಿ.ಒ.ಗಳನ್ನು ಮುಟ್ಟಲು ಅವುಗಳು ಭಯಪಡುತ್ತಿವೆ. ಎಲೆಕ್ಟೊರಲ್ ಬಾಂಡ್ಸ್ ಮರೆಯಲ್ಲಿ ನೂರಾರು ಕೋಟಿ ರೂಪಾಯಿಗಳಿಗೆ ಯಾವುದೇ ಮೂಲವನ್ನು ತೋರಿಸಬೇಕಾದ ಹೊಣೆಗಾರಿಕೆಯಿಲ್ಲದೆ ಸೇರಿಸಿಟ್ಟಿರುವ ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಕ್ರಮಕೈಗೊಳ್ಳುವ ತನಕ ತನಿಖಾ ಸಂಸ್ಥೆಯು ತನ್ನ ವಿಶ್ವಾಸಾರ್ಹತೆಯನ್ನು ಪ್ರತಿಪಾದಿಸುವುದು ಸಾಧ್ಯವಿಲ್ಲ ಎಂದು ರಾಷ್ಟ್ರವು ಚೆನ್ನಾಗಿ ತಿಳಿದಿದೆ ಎಂದು ಸಮಿತಿಯ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಪಿ.ಎಫ್.ಐ. ವಿರುದ್ಧದ ಹಗೆತನವು ನಿರ್ದಿಷ್ಟ ಸಂಘಟನೆಯ ವಿರುದ್ಧದ ಪ್ರತ್ಯೇಕ ಪ್ರಯತ್ನವಲ್ಲ ಎಂದು ಎನ್.ಇ.ಸಿ. ಪುನರುಚ್ಚರಿಸುತ್ತದೆ. ಇದು ಭಾರತದಲ್ಲಿ ಸಮಾನ ನಾಗರಿಕರಾಗಿ ಜೀವಿಸುವ ಮುಸ್ಲಿಮರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ವಿಸ್ತೃತ ಹಿಂದುತ್ವ ಅಜೆಂಡಾದ ಭಾಗವಾಗಿದೆ ಎಂದು ಸಮಿತಿ ತಿಳಿಸಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಗುರಿಪಡಿಸುವ ಮೂಲಕ ಭಾರತೀಯ ಮುಸ್ಲಿಮ್ ಸಮುದಾಯದ ಮುಂಚೂಣಿಯಲ್ಲಿರುವ ಪ್ರಾಮಾಣಿಕ ಸಂಘಟನೆಗಳು, ಸಂಸ್ಥೆಗಳು ಮತ್ತು ನಾಯಕರನ್ನು ಭಯಪಡಿಸುವುದು ಅವರ ಅಂತಿಮ ಗುರಿಯಾಗಿದೆ. ಹೊಸ ಸುತ್ತಿನ ಪ್ರತೀಕಾರದ ಕ್ರಮವು ಸಂಘಟನೆಯನ್ನು ಮೌನಗೊಳಿಸದು ಎಂದು ಪಾಪ್ಯುಲರ್ ಫ್ರಂಟ್ ನ ಕಾರ್ಯಕಾರಿ ಸಮಿತಿ ಸ್ಪಷ್ಟಪಡಿಸಿದೆ.
ಇಂತಹ ಅಧಿಕಾರದ ದುರುಪಯೋಗಕ್ಕಾಗಿ ವ್ಯಕ್ತವಾಗಿರುವ ಸಾರ್ವಜನಿಕ ಪ್ರತಿಕ್ರಿಯೆಗಳು ಸರಕಾರಿ ಏಜೆನ್ಸಿಗಳು ಭಾರತೀಯ ಸಂವಿಧಾನ ಮತ್ತು ಕಾನೂನು ನಿಯಮಕ್ಕೆ ಮರಳಿ ಅಧೀನರಾಗಲು ಒಂದು ಕರೆಗಂಟೆಯಾಗಿದೆ ಎಂದು ಸಮಿತಿ ತಿಳಿಸಿದೆ.