ಚಾಮರಾಜನಗರ: ಸಾರ್ವಜನಿಕರ ವ್ಯಾಪಕ ವಿರೋಧದ ನಡುವೆಯೂ ಕಳೆದ 15 ದಿನಗಳಿಂದ ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾವರ್ಗ ತರಬೇತಿಯು ಹನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದ್ದು, ಬಿ.ಎಂ.ಜಿ ಪ್ರೌಢಶಾಲೆಯಲ್ಲಿ ನಡೆದ ಸಮಾರೋಪ ಸಮಾರಂಭದ ಅಂಗವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಿತು.
ಧರ್ಮ ಮತ್ತು ಜಾತಿ ವಿಚಾರದಲ್ಲಿ ಸಾಮರಸ್ಯ ಕದಡುತ್ತಿರುವ ಆರ್.ಎಸ್.ಎಸ್ ನಗರದ ಬಿಎಂಜಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಬಡಾವಣೆ ಮುಖ್ಯರಸ್ತೆಯಲ್ಲಿ ಪಥಸಂಚಲನ ನಡೆಸುವುದಕ್ಕೆ ಅವಕಾಶ ನೀಡಬಾರದು ಎಂದು ಸಮುದಾಯದ ಮುಖಂಡರು ಇನ್ ಸ್ಪೆಕ್ಟರ್ ಸಂತೋಷ್ ಕಶ್ಯಪ್ ಅವರಿಗೆ ಮನವಿ ಮಾಡಿದ್ದರು.
ಇನ್ ಸ್ಪೆಕ್ಟರ್ ಸಂತೋಷ್ ಕಶ್ಯಪ್ ಮಾತನಾಡಿ,ಯಾವುದೇ ಸಂಘಟನೆ ಸಾರ್ವಜನಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದಾಗ ಮುಖಂಡರ ಮತ್ತು ಇನ್ ಸ್ಪೆಕ್ಟರ್ ನಡುವೆ ಕೆಲವು ಗಂಟೆ ವಾಗ್ವಾದ ನಡೆಯಿತು.
ಪಥಸಂಚಲನಕ್ಕೆ ದಲಿತ ಸಂಘಟನೆಯಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸ್ ಇಲಾಖೆ ಚಾಮರಾಜನಗರ,ಗುಂಡ್ಲುಪೇಟೆ ಸಂತೇಮರಳ್ಳಿ, ಕೊಳ್ಳೇಗಾಲ ರಾಮಾಪುರ ಠಾಣೆಗಳಿಂದ ಹೆಚ್ಚಿನ ಇನ್ ಸ್ಪೆಕ್ಟರ್, ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪಥಸಂಚಲನಕ್ಕೆ ಭದ್ರತೆ ನೀಡಲು ಮುಂದಾಯಿತು. ಅಲ್ಲದೇ ಎರಡು ಜಿಲ್ಲಾ ಸಶಸ್ತ್ರ ಮಿಸಲು ಪಡೆ ಹಾಗೂ ಒಂದು ಕೆ.ಎಸ್ ಆರ್ ಪಿ ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.
ಪಟ್ಟಣದ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದಿಂದ ಆರಂಭವಾದ ಪಥಸಂಚಲನ ಮುಖ್ಯ ರಸ್ತೆ ಹಾಗೂ ವಿವಿಧ ಬಡಾವಣೆಗಳಲ್ಲಿ ಸಾಗಿ ಬಿ.ಎಂ.ಜಿ ಶಾಲೆಯಲ್ಲಿ ಕೊನೆಗೊಂಡಿತು.