ಪ್ರೊ. ಜಿ. ಎನ್. ಸಾಯಿಬಾಬಾ ಬಿಡುಗಡೆ ಆದೇಶವನ್ನು ಅಮಾನತ್ತಿನಲ್ಲಿಟ್ಟ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿ. ಎನ್. ಸಾಯಿಬಾಬಾರನ್ನು ಬಿಡುಗಡೆ ಮಾಡಿ ನಾಗಪುರದ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟು ಅಮಾನತಿನಲ್ಲಿಟ್ಟಿದೆ.

- Advertisement -

ಬಿಡುಗಡೆ ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಜಸ್ಟಿಸ್ ಗಳಾದ ಎಂ. ಆರ್. ಶಾ, ಬೇಲಾ ಎಂ. ತ್ರಿವೇದಿ ಅವರಿದ್ದ ಪೀಠವು ನಕ್ಸಲ್ ಸಂಬಂಧದ ಆಪಾದನೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಾಯಿಬಾಬಾರ ಬಿಡುಗಡೆಯನ್ನು ಅಮಾನತಿನಲ್ಲಿಟ್ಟಿದೆ.

ಮಹಾರಾಷ್ಟ್ರ ಸರಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೂಡಲೆ ಬಿಡುಗಡೆ ಮಾಡುವಂತೆ ಸೆರೆಮನೆ ಅಧಿಕಾರಿಗಳಿಗೆ ಸೂಚಿಸಿದ್ದ ನಾಗಪುರದ ಬಾಂಬೆ ಹೈಕೋರ್ಟ್ ಪೀಠದ ಆದೇಶ ರದ್ದು ಪಡಿಸುವಂತೆ ಕೋರಿಕೊಂಡರು.

- Advertisement -

2017ರಲ್ಲಿ ನಕ್ಸಲ್ ಸಂಪರ್ಕದ ಆರೋಪದ ಮೇಲೆ ಸಾಯಿಬಾಬಾರಿಗೆ ಯುಎಪಿಎ- ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಬಂಧನ ಮತ್ತು ಜೀವಾವಧಿ ಶಿಕ್ಷೆ ಆಗಿತ್ತು. ಶುಕ್ರವಾರ ನಾಗಪುರ ವಿಭಾಗೀಯ ಉಚ್ಚ ನ್ಯಾಯಾಲಯದ ಪೀಠವು ಅವರನ್ನು ಬಿಡುಗಡೆ ಮಾಡಲು ಕಟ್ಟಳೆಯಿಟ್ಟಿತ್ತು. ಬಿಡುಗಡೆಗೆ ಮೊದಲೇ ಈಗ ಬಿಡುಗಡೆ ಆಜ್ಞೆಯನ್ನು ಸರ್ವೋಚ್ಚ ನ್ಯಾಯಾಲಯವು ಬದಿಗಿರಿಸಿದೆ.
2014ರಲ್ಲಿ ಪ್ರೊ. ಸಾಯಿಬಾಬಾರನ್ನು ಬಂಧಿಸಲಾಗಿತ್ತು. 2017ರಲ್ಲಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2016ರ ಏಪ್ರಿಲ್ ನಲ್ಲಿ ಅವರಿಗೆ ಮಧ್ಯಾವಧಿ ಜಾಮೀನು ನೀಡಲಾಗಿತ್ತು. ಜೀವಾವಧಿ ಶಿಕ್ಷೆಯಾದ ಮೇಲೆ ಅವರನ್ನು ನಾಗಪುರ ಕೇಂದ್ರೀಯ ಜೈಲಿನಲ್ಲಿ ಇಡಲಾಗಿತ್ತು.

90 ಶೇಕಡಾ ದೈಹಿಕ ವಿಫಲತೆಯ 55ರ ಪ್ರಾಯದ ಪ್ರೊಫೆಸರ್ ಗಾಲಿ ಕುರ್ಚಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಸಾಯಿಬಾಬಾರೊಂದಿಗೆ ಮಹೇಶ್ ಟಿಕ್ರಿ, ಪಾಂಡುಪೋರ ನರೋಟೆ, ಹೇಮ್ ಕೇಶವದತ್ತ ಮಿಶ್ರಾ, ಪ್ರಶಾಂತ್ ರಾಹಿ, ವಿಜಯ್ ನಾನ್ ತಿರ್ಕಿ ಸಹ ಉಚ್ಚ ನ್ಯಾಯಾಲಯದ ಪೀಠ ಬಿಡುಗಡೆ ಮಾಡಿತ್ತು. ನರೋಟೆಯವರು ಆಗಸ್ಟ್ 26ರಂದು ಜೈಲಿನಲ್ಲೇ ಸ್ವೈನ್ ಫ್ಲೂನಲ್ಲಿ ಸಾವಿಗೀಡಾಗಿದ್ದರು.

Join Whatsapp