ಬಂಟ್ವಾಳ: ತಾಲೂಕಿನ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣದ ಕಾಮಗಾರಿ ಆರಂಭಿಸಿದ್ದು, ನಿರ್ಮಾಣ ಹಂತದಲ್ಲಿರುವಾಗಲೇ ಇದರ ಪಿಲ್ಲರ್ ಕುಸಿದಿದ್ದು, ಬಿಜೆಪಿಯ ಮೇಲಿರುವ 40% ಕಮಿಷನ್ ಆರೋಪಕ್ಕೆ ಪುಷ್ಟಿ ನೀಡಿದಂತಿದೆ ಹಾಗೂ ಈ ಕಮಿಷನ್ ದಂಧೆಗೆ ಕಲ್ಲಡ್ಕದ ಫ್ಲೈ ಓವರ್ ಕಾಮಗಾರಿ ಬಲಿಯಾಗಿದೆ ಎಂದು ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಮೂನಿಶ್ ಆಲಿ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದ್ದಾರೆ.
ಈ ಕಾಮಗಾರಿ ಆರಂಭದಿಂದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ಫ್ಲೈಓವರ್ ನಿರ್ಮಾಣದ ನಿಧಾನಗತಿಯ ಪರಿಣಾಮದಿಂದ ಹಲವು ಬಗೆಯ ತೊಂದರೆಗಳನ್ನು ಅನುಭವಿಸುತ್ತಿದ್ದರು. ಆದರೆ ಇದೀಗ ನಿರ್ಮಾಣ ಹಂತದಲ್ಲೇ ಅದರ ಪಿಲ್ಲರ್ ಕುಸಿತಗೊಂಡಿದೆ. ಈ ಕುಸಿತವು ಕಾಮಗಾರಿಯಲ್ಲಿನ ನಿರಾಸಕ್ತಿ ಮತ್ತು ಅವೈಜ್ಞಾನಿಕತೆಯನ್ನು ಎತ್ತಿ ತೋರಿಸುತ್ತಿದೆ. ಕಾಮಗಾರಿಗೆ ಮಂಜೂರಾದ ಮೊತ್ತದಲ್ಲಿ ಇದರ ಸೂತ್ರಧಾರರು ಎಷ್ಟರ ಮಟ್ಟಿಗೆ ಕಮಿಷನ್ ಪಡೆದಿದ್ದಾರೆ ಎಂಬುವುದಕ್ಕೆ ಈ ನಿರ್ಮಾಣ ಹಂತದ ಕುಸಿತವೇ ಸಾಕ್ಷಿ ಎಂದಿದ್ದಾರೆ.
ಈ ಕೂಡಲೇ ಇದಕ್ಕೆ ಸೂಕ್ತ ಪರಿಹಾರವನ್ನು ಕಲ್ಪಿಸಿ, ಪರ್ಯಾಯ ವ್ಯವಸ್ಥೆಯನ್ನು ಮಾಡುವ ಮೂಲಕ ಯಾವುದೇ ಬಗೆಯ ಕಮಿಷನ್ ದಂಧೆ ನಡೆಸದೆ ಅಚ್ಚುಕಟ್ಟಾಗಿ ಮರು ಕಾಮಗಾರಿಯನ್ನು ಆರಂಭಿಸಬೇಕು ಮತ್ತು ಈ ಕಾಮಗಾರಿಯಲ್ಲಿ ಯಾರೆಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಕಮಿಷನ್ ಪಡೆದಿದ್ದಾರೆ ಅವರೆಲ್ಲನ್ನೂ ಬಯಲಿಗೆಳೆಯಬೇಕು ಹಾಗೂ ಅವರ ವಿರುದ್ಧ ಸೂಕ್ತ ಕ್ರಮವನ್ನೂ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.