ಬಾಲಕಿಯ ಮೇಲೆ ಅತ್ಯಾಚಾರ  ಪ್ರಕರಣ: ಕಠಿಣ ಶಿಕ್ಷೆ ಆಗಲೇಬೇಕು  ಎಂದ ಕುಮಾರಸ್ವಾಮಿ

Prasthutha|

ಬೆಂಗಳೂರು: ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಪ್ರಕರಣದ ದುಷ್ಕರ್ಮಿಗೆ ಕ್ಷಮೆ ನೀಡದೆ  ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

- Advertisement -

ಟ್ಯೂಷನ್ ಗೆ ತೆರಳಿದ್ದ 10 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಆಘಾತಕಾರಿ ಪ್ರಕರಣ ಮಳವಳ್ಳಿಯಲ್ಲಿ ಮಂಗಳವಾರ ನಡೆದಿತ್ತು. ಮೃತದೇಹ ನೀರಿನ ಸಂಪ್ ನಲ್ಲಿ ಪತ್ತೆಯಾಗಿತ್ತು. 50 ವರ್ಷದ   ವ್ಯಕ್ತಿಯನ್ನು  ಪೊಲೀಸರು ಬಂಧಿಸಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಕುಮಾರ ಸ್ವಾಮಿ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ. ಇಂಥ ಪಾತಕ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

- Advertisement -

ತಪ್ಪು ಮಾಡಿದ ಅಪರಾಧಿಗೆ ಕಠಿಣ ಶಿಕ್ಷೆ ಆಗಲೇಬೇಕು ಹಾಗೂ ಆ ಪಾತಕಿಗೆ ಕ್ಷಮೆ ಎನ್ನುವುದೇ ಇರಬಾರದು. ಭವಿಷ್ಯದಲ್ಲಿ ಇಂಥ ನೀಚ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟೆಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೆತ್ತ ಮಗುವನ್ನು ಕಳೆದುಕೊಂಡು ಶೋಕದಲ್ಲಿರುವ ಆ ಬಾಲಕಿಯ ಪೋಷಕರ ದುಃಖದಲ್ಲಿ ನಾನೂ ಭಾಗಿ. ನೂರುಕಾಲ ಬಾಳಿ ಬದುಕಬೇಕಿದ್ದ ಮಗುವಿನ ದುರ್ಮರಣ ನನಗೆ ಅತೀವ ನೋವುಂಟು ಮಾಡಿದೆ. ಆ ಬಾಲಕಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ತಂದೆ ತಾಯಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.



Join Whatsapp