ಭೂತಾನ್ ನಿಂದ ಹಸಿ ಅಡಿಕೆ ಆಮದು; ಕೇಂದ್ರದ ನಿರ್ಧಾರಕ್ಕೆ  ಬಿಜೆಪಿ ಶಾಸಕನ ವಿರೋಧ

Prasthutha|

ಸಾಗರ: ಯಾವುದೇ ಕಾರಣಕ್ಕೂ ನಮ್ಮ ಅಡಿಕೆ ಬೆಳೆಗಾರರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ನಿರ್ಧಾರ ಕೇಂದ್ರ ಸರಕಾರ ತೆಗೆದುಕೊಳ್ಳಬಾರದು. ಭೂತಾನ್ ನಿಂದ ಹಸಿ ಅಡಿಕೆ ಆಮದು ಮಾಡುವ ಕೇಂದ್ರ ಸರಕಾರದ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಹೀಗಾದರೆ ದೇಶೀಯ ಅಡಿಕೆ ಧಾರಣೆ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ಅಡಿಕೆ ಬೆಲೆ ಕುಸಿಯುವ ಸಾಧ್ಯತೆ ಇದೆ ಎಂದರು.

ಈಗಾಗಲೇ ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ ಭೂತಾನ್ ದೇಶಕ್ಕೆ ಪೆಟ್ರೋಲ್ ನೀಡುತ್ತಿದೆ. ಇನ್ನು ಕೆಲವು ಸಹಕಾರವನ್ನೂ ಆ ದೇಶಕ್ಕೆ ನೀಡುವ ಬಗ್ಗೆ ನಮ್ಮ ಅಭ್ಯಂತರವಿಲ್ಲ.  ಆದರೆ ಯಾವುದೇ ಕಾರಣಕ್ಕೂ ಅಡಿಕೆಯನ್ನು ಆಮದು ಮಾಡಿಕೊಳ್ಳುವುದು ಬೇಡ ಎಂದರು.

- Advertisement -

ಸಾರ್ಕ್ ಒಪ್ಪಂದದ ಅಡಿ ಇಂತಹ ಸಣ್ಣಪುಟ್ಟ ವಹಿವಾಟುಗಳು ದೇಶಗಳ ಮಧ್ಯೆ  ನಡೆಯುತ್ತಿದೆ. ಸರಕಾರ ಆಮದು ಶುಲ್ಕ ಹೆಚ್ಚಿಸುವ ಮೂಲಕ ಅಡಿಕೆ ಒಳಗೆ ಬರದಂತೆ ನೋಡಿಕೊಳ್ಳಬೇಕು. ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಒಳಗೊಂಡ ನೇತೃತ್ವದ ನಿಯೋಗದ ಜೊತೆ ತೆರಳಿ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳದಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹಾಲಪ್ಪ ಭರವಸೆ ನೀಡಿದರು.



Join Whatsapp