ನವದೆಹಲಿ: ತನ್ನ ನಾಗರಿಕರಿಗೆ ಇಂಧನವನ್ನು ಪೂರೈಸುವ ನೈತಿಕ ಕರ್ತವ್ಯವನ್ನು ಭಾರತ ಸರ್ಕಾರ ಹೊಂದಿದೆ. ಅದು ಎಲ್ಲಿಂದ ಬೇಕಾದರೂ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೇಶವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸಿಲ್ಲ ಎಂದ ಅವರು, ರಷ್ಯಾ – ಉಕ್ರೇನ್ ಯುದ್ಧವು ಜಾಗತಿಕ ಇಂಧನ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇಂಧನ ಪೂರೈಕೆ ಮತ್ತು ಬೇಡಿಕೆಗೆ ಅಡ್ಡಿಪಡಿಸಿದೆ ಮತ್ತು ದೀರ್ಘಕಾಲದ ವ್ಯಾಪಾರ ಸಂಬಂಧಗಳನ್ನು ಹಾಳುಗೆಡವಿದೆ ಎಂದು ತಿಳಿಸಿದರು.
ಈ ಬೆಳವಣಿಗೆ ಪ್ರಪಂಚದಾದ್ಯಂತ ಅನೇಕ ಗ್ರಾಹಕರು ಮತ್ತು ವ್ಯವಹಾರಗಳ ಮೌಲ್ಯವನ್ನು ಹೆಚ್ಚಿಸಿದ್ದು, ಮನೆ, ಕೈಗಾರಿಕೆ ಮತ್ತು ಹಲವಾರು ರಾಷ್ಟ್ರಗಳ ಸಂಪೂರ್ಣ ಆರ್ಥಿಕತೆಯನ್ನು ಹಾನಿಗೊಳಿಸಿದೆ ಎಂದು ಅವರು ಸಾಂದರ್ಭಿಕವಾಗಿ ತಿಳಿಸಿದರು.
ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದು ಪ್ರಮಾಣ ಏಪ್ರಿಲ್’ನಿಂದ 50 ಪಟ್ಟು ಹೆಚ್ಚಾಗಿದೆ ಮತ್ತು ಈಗ ಅದು ವಿದೇಶದಿಂದ ಖರೀದಿಸಿದ ಎಲ್ಲಾ ಕಚ್ಚಾ ತೈಲದ ಶೇಕಡಾ 10 ರಷ್ಟಿದೆ. ಉಕ್ರೇನ್ ಯುದ್ಧಕ್ಕಿಂತ ಮೊದಲು ಭಾರತವು ಆಮದು ಮಾಡಿಕೊಂಡ ತೈಲದಲ್ಲಿ ರಷ್ಯಾದ ತೈಲವು ಕೇವಲ ಶೇಕಡಾ 0.2 ರಷ್ಟಿತ್ತು.
ಈ ಮಧ್ಯೆ ಉಕ್ರೇನ್ ಮೇಲಿನ ದಾಳಿಯ ಬಳಿಕ ಪಾಶ್ಚಿಮಾತ್ಯ ದೇಶಗಳ ರಷ್ಯಾದಿಂದ ಇಂಧನ ಖರೀದಿಯನ್ನು ಕಡಿಮೆಗೊಳಿಸುತ್ತಾ ಬಂದಿದೆ.