ಮುಂಬಯಿ: ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸ್ಫೋಟಗೊಂಡು ಏಳು ವರ್ಷದ ಬಾಲಕನೋರ್ವ ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ವಸಾಯಿಯಲ್ಲಿ ನಡೆದಿದೆ.
ಶಬ್ಬೀರ್ ಶಹನವಾಜ್ ಅನ್ಸಾರಿ ಎಂಬಾತನೇ ಮೃತ ಬಾಲಕ. ರಾಮದಾಸ್ ನಗರದ ನಿವಾಸಿ ಶಹನವಾಜ್ ಅನ್ಸಾರಿ ಎಂಬುವರು ಸೆ.23ರಂದು ಬೆಳಗಿನಜಾವ 2.30ರ ಸುಮಾರಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿಯನ್ನು ಚಾರ್ಜ್ ಮಾಡಲು ಮನೆಯ ಹಾಲ್ನಲ್ಲಿ ಇಟ್ಟಿದ್ದರು. ಆದರೆ, ಬೆಳಗಿನ ಜಾವ 5:30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದೆ.
ಸ್ಕೂಟರ್ನ ಬ್ಯಾಟರಿ ಸ್ಫೋಟಿಸಿದ ಪರಿಣಾಮ ಸಭಾಂಗಣದಲ್ಲಿ ಮಲಗಿದ್ದ ಬಾಲಕ ಶಬ್ಬೀರ್ ಹಾಗೂ ತಾಯಿ ರುಕ್ಸಾನಾ ಗಾಯಗೊಂಡಿದ್ದು,ಅದರಲ್ಲೂ ಶಬ್ಬೀರ್ ಶೇ.70ರಿಂದ 80ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಈ ಸಾವಿಗೆ ಸ್ಕೂಟಿ ಕಂಪನಿಯೇ ಕಾರಣ ಎಂದು ಮೃತ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.