ಚಿಂತಾಮಣಿ : ದಲಿತ ಬಾಲಕನನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಥಳಿಸಿರುವುದು ಖಂಡನೀಯ: ಎಸ್‌‌ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌

Prasthutha|

ಬೆಂಗಳೂರು: ಶತಮಾನಗಳಿಂದ ಮೇಲ್ಜಾತಿ ಎಂದು ಕರೆಸಿಕೊಳ್ಳುವ ಜನ ದಲಿತರು, ಅದರಲ್ಲೂ ಅಸ್ಪೃಶ್ಯರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಲೇ ಬಂದಿದ್ದಾರೆ. ನಿನ್ನೆ ಚಿಂತಾಮಣಿಯಲ್ಲಿ ದಲಿತ ಬಾಲಕನನ್ನು ಕಳ್ಳತನದ ಆರೋಪದ ಮೇಲೆ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿರುವುದು ಈ ದೇಶದಲ್ಲಿ ಏನೇ ಕಾಯ್ದೆ, ಕಾನೂನು ಇದ್ದರೂ ದಲಿತರ ಮೇಲಿನ ದೌರ್ಜನ್ಯ ನಿಲ್ಲದು ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇಂತಹ ಅಮಾನುಷ ಘಟನೆಗಳು ನಿರಂತರವಾಗಿ ಮರುಕಳಿಸಲು ಕಾರಣ ದಲಿತರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ಶಿಕ್ಷೆಗೆ ಗುರಿಯಾಗುತ್ತಿರುವ ಆರೋಪಿಗಳ ಪ್ರಮಾಣ. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಕೇವಲ 7% ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ . ಈ ಪರಿಸ್ಥಿತಿಯೇ ದಲಿತರ ಮೇಲೆ ದೌರ್ಜನ್ಯ ಎಸಗಲು ಮೇಲ್ಜಾತಿಗಳಿಗೆ ಹಿಂಜರಿಕೆಯನ್ನು ಮತ್ತು ಭಯ ಇಲ್ಲದೆ ಇರಲು ಕಾರಣ. ಒಂದೆಡೆ ಪಾಳೆಗಾರ ಮನಸ್ಥಿತಿ, ಇನ್ನೊಂದೆಡೆ ಕಾನೂನುಗಳ ನಿಷ್ಕ್ರಿಯತೆ ದಲಿತ ಸಮಾಜವನ್ನು ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಚಿಂತಾಮಣಿಯ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕೆಂದು ಆಗ್ರಹಿಸಿದ್ದಾರೆ.

Join Whatsapp