ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ದಿನದ ಅಂತ್ಯಕ್ಕೆ ಆರು ಕೂಟ ದಾಖಲೆ ನಿರ್ಮಾಣವಾಗಿದೆ.
ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಸ್ನ್ಯಾಚ್‌ನಲ್ಲಿ 84 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 107 ಕೆಜಿ ಸೇರಿದಂತೆ ಒಟ್ಟು 191 ಕೆಜಿ ಭಾರವೆತ್ತಿದ ಚಾನು ಸ್ವರ್ಣ ಪದಕಕ್ಕೆ ಕೊರೊಳಿಡ್ಡಿದರು. 87 ಕೆಜಿ (82 ಕೆಜಿ ಪ್ಲಸ್ 105 ಕೆಜಿ) ಭಾರವೆತ್ತಿದ ಮಣಿಪುರ ತಂಡದವರೇ ಆದ ಸಂಜಿತಾ ಚಾನು ಬೆಳ್ಳಿ ಮತ್ತ ಒಡಿಶಾದ ಸ್ನೇಹಾ ಸೋರೆನ್ ಕಂಚಿನ ಪದಕ ಗೆದ್ದರು.
28 ವರ್ಷಗಳ ದಾಖಲೆ ಮುರಿದ ಪರ್ವೇಝ್ ಖಾನ್
ಗಾಂಧಿನಗರದ ಐಐಟಿ ಕ್ಯಾಂಪಸ್‌ನಲ್ಲಿ ನಡೆದ ಪುರುಷರ 1500 ಮೀಟರ್ ಓಟದಲ್ಲಿ ಪರ್ವೇಝ್ ಖಾನ್ 3:40.89 ನಿಮಿಷದಲ್ಲಿ ಗುರಿ ತಲುಯಪಿ ಮೊದಲಿಗರಾದರು. ಆ ಮೂಲಕ ಕಳೆದ 28 ವರ್ಷಗಳಿಂದ ಬಹದ್ದೂರ್ ಪ್ರಸಾದ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು (3:43.57 ನಿಮಿಷ) ತನ್ನದಾಗಿಸಿಕೊಂಡರು. ಅಜಯ್ ಕುಮಾರ್ ಸರೋಜ್ ಬೆಳ್ಳಿ ಗೆದ್ದರು.
ಪುರುಷರ ಟ್ರಿಪಲ್ ಜಂಪ್‌ನಲ್ಲಿ ಕೂಟ ದಾಖಲೆ
ಪುರುಷರ ಟ್ರಿಪಲ್ ಜಂಪ್‌ನಲ್ಲಿ 16.68 ಮೀಟರ್ ಜಿಗಿದ ತಮಿಳುನಾಡಿನ ಪ್ರವೀಣ್ ಚಿತ್ರವೆಲ್, ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಇದರೊಂದಿಗೆ ರಂಜಿತ್ ಮಹೇಶ್ವರಿ ಅವರ ಹೆಸರಿನಲ್ಲಿದ್ದ 2015ರ 16.66 ಮೀಟರ್ ದಾಖಲೆ ಪತನವಾಯಿತು. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಕೇರಳದ ಎಲ್ದೋಸ್ ಪೌಲ್ ಮತ್ತು ಅಬ್ದುಲ್ಲಾ ಅಬೂಬಕರ್ವ ಗೈರಾಗಿದ್ದು, ಪ್ರವೀಣ್ ಹಾದಿಯನ್ನು ಸುಗಮಗೊಳಿಸಿತು.
ಖಾತೆ ತೆರೆದ ಕರ್ನಾಟಕ
ಅಹಮದಾಬಾದ್‌ನಲ್ಲಿ ಆರಂಭವಾದ 36ನೇ ರಾಷ್ಟ್ರೀಯ ಕ್ರೀಡಾಕೂಟದ ಮೊದಲ ದಿನವೇ ಕರ್ನಾಟಕ ಪದಕದ ಖಾತೆ ತೆರೆದಿದೆ. ಮಹಿಳೆಯರ ಹೈಜಂಪ್‌ನಲ್ಲಿ 1.81 ಮೀಟರ್ ಜಿಗಿದ ಅಭಿನಯ ಎಸ್.ಶೆಟ್ಟಿ ಬೆಳ್ಳಿ ಪದಕ ಗೆದ್ದರು. 1.83 ಮೀಟರ್ ಜಿಗಿದ ಮಧ್ಯಪ್ರದೇಶದ ಸ್ವಪ್ನಾ ಬರ್ಮನ್, ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ತಮಿಳುನಾಡಿನ ಗ್ರೇಸಿನಾ ಮೆರ್ಲಿ (1.81 ಮೀಟರ್) ಕಂಚು ಪಡೆದರು.
ಶಾಟ್‌ಪುಟ್
ಮಹಿಳೆಯರ ವಿಭಾಗದಲ್ಲಿ 17.14 ಮೀಟರ್ ಶಾಟ್‌ಪುಟ್ ಎಸೆದ ಉತ್ತರ ಪ್ರದೇಶದ ಕಿರಣ್ ಬಾಲಿಯಾನ್ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಹ್ಯಾಮರ್ ಥ್ರೋ:
ಪುರುಷರ ವಿಭಾಗ: ದಮ್‌ನೀತ್ ಸಿಂಗ್, 67.62 ಮೀಟರ್ (ನೂತನ ಕೂಟ ದಾಖಲೆ)
ಮಹಿಳೆಯರ ವಿಭಾಗ: ಉತ್ತರ ಪ್ರದೇಶದ ಸರಿತಾ ರೋಮಿತ್ ಸಿಂಗ್, 61.03 ಮೀಟರ್