ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಓರ್ಗನೈಝೇಶನ್ (SIO) ವಿದ್ಯಾರ್ಥಿ ಸಂಘಟನೆಯು 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಒಗ್ಗಟ್ಟನ್ನು ಬಲಪಡಿಸೋಣ, ಮಾನವೀಯತೆ ಎತ್ತಿ ಹಿಡಿಯೋಣ’ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು SIO ರಾಜ್ಯಾಧ್ಯಕ್ಷ ಶೇಝಾದ್ ಶಕೀಬ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಶೇಝಾದ್, ಸಂವಿಧಾನವು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಘೋಷಿಸಿಕೊಂಡಿದ್ದರೂ ಪ್ರಜಾಪ್ರಭುತ್ವ ಭಾರತದಲ್ಲಿಂದು ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣವು ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣವು ಸಂವಿಧಾನವನ್ನು ಆಶಯವಾಗಿದೆ, ಇದೇ ಆಶಯವನ್ನು ಎಸ್ ಐಒ ಹೊಂದಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತಾಡಿದ ಎಸ್ ಐಒ ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ ಫವಾಝ್ ಶಾಹೀನ್, 40 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಎಸ್ ಐಒ ಪ್ರತೀ ಬಾರಿಯೂ ಶೈಕ್ಷಣಿಕ ಕುಂದು-ಕೊರತೆಗಳನ್ನು ನಿಭಾಯಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ POSCO ಮತ್ತು ಸೈಬರ್ ಅಪರಾಧದ ಕುರಿತು ಅಭೀಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
CFI ಬ್ಯಾನ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ಧಾಂತವಾಗಿ ನಮ್ಮಲ್ಲಿ ಹಲವಾರು ವಿರೋಧಗಳು ಇದ್ದರೂ ಒಂದು ಸಂಘಟನೆಗೆ ಪ್ರಜಾಪ್ರಭುತ್ವ ದೇಶದಲ್ಲಿ ನಿರ್ಬಂದ ಹೇರಬಾರದು. ವಿದ್ಯಾರ್ಥಿ ಒಕ್ಕೂಟವಾಗಿ ನಮ್ಮ ನಿಲುವು ಇದು, ನಮ್ಮ ನಾಯಕರೂ ಅದನ್ನು ಖಂಡಿಸಿದ್ದಾರೆ ಎಂದು ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಝಕ್ಕಿರ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ನಾಸಿರ್ ಉಡುಪಿ ಸಹಿತ ಹಲವು SIO ನಾಯಕರು ಉಪಸ್ಥಿತರಿದ್ದರು.