ಭಾರತ ಜೋಡೋ ಯಾತ್ರೆ ಬಿಜೆಪಿ ಚಿತ್ತಗೆಡಿಸಿದೆ: ಜೈರಾಮ್ ರಮೇಶ್

Prasthutha|

ಬೆಂಗಳೂರು: ಭಾರತ ಜೋಡೋ ಯಾತ್ರೆ ಬಿಜೆಪಿ ಚಿತ್ತಗೆಡಿಸಿದ್ದು, ಬಿಜೆಪಿ ಸುಳ್ಳು ಸುದ್ದಿಗಳ ಮೂಲಕ ಈ ಯಾತ್ರೆಯನ್ನು ಟೀಕಿಸುತ್ತಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಚಿಂತೆಗೀಡು ಮಾಡಿದೆ. ಈ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಿರುವುದು ಅವರಿಗೆ ಮನದಟ್ಟಾಗಿದೆ ಎಂದು ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ತಿಳಿಸಿದ್ದಾರೆ.

- Advertisement -

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಂದು ಭಾರತ ಜೋಡೋ ಯಾತ್ರೆಯ 23ನೇ ದಿನ. ಈ ಯಾತ್ರೆ ತಮಿಳುನಾಡಿನಲ್ಲಿ 62 ಕಿ.ಮೀ, ಕೇರಳದಲ್ಲಿ 355 ಕಿ.ಮೀ ಕ್ರಮಿಸಿ ಈಗ ಕರ್ನಾಟಕ ರಾಜ್ಯದಲ್ಲಿ ಮುಂದಿನ 21 ದಿನಗಳ ಕಾಲ 511 ಕಿ.ಮೀ ಕ್ರಮಿಸಲು ಪಾದಯಾತ್ರೆ ಆರಂಭವಾಗಿದೆ ಎಂದು ತಿಳಿಸಿದರು.

ಸೆ.7ರಂದು ಈ ಯಾತ್ರೆ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದು, ಎರಡು ದಿನ ಮುಂಚಿತವಾಗಿ ಸೆ.5ರಂದು ರಾಹುಲ್ ಗಾಂಧಿ ಅವರು ಅಹಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿಂದ ಕನ್ಕುಮಾರಿಗೆ ತೆರೆಳಿ ವಿವೇಕಾನಂದ ಸ್ಮಾರಕ, ಗಾಂಧಿ ಮಂಟಪ, ಕಾಮರಾಜ ಮಂಟಪಕ್ಕೆ ಭೇಟಿ ನೀಡಿ ಈ ಯಾತ್ರೆ ಆರಂಭಿಸಿದರು. ಈ ಯಾತ್ರೆಯಲ್ಲಿ ಭಾಗಿಯಾಗಿರುವ ಯಾತ್ರಿಗಳ ಪೈಕಿ 1/3 ರಷ್ಟು ಯಾತ್ರಿಗಳು ಮಹಿಳೆಯರು, ಈ ಯಾತ್ರಿಗಳ ಸರಾಸರಿ ವಯೋಮಾನ 38 ವರ್ಷ. ರಾಹುಲ್ ಗಾಂಧಿ ಅವರು ಈ ಯಾತ್ರೆಯ ಪ್ರಮುಖ ನೇತೃತ್ವ ವಹಿಸಿದ್ದು, ಯಾತ್ರೆ ಇದುವರೆಗೂ ದಿನನಿತ್ಯ ಸರಾಸರಿ 21 ಕಿ.ಮೀ ದೂರದಷ್ಟು ಸಾಗುತ್ತಿದೆ ಎಂದರು.

- Advertisement -

ಈ ಯಾತ್ರೆ ಮಾಡಲು ಪ್ರಮುಖ ಕಾರಣ ಎಂದರೆ, ಮೋದಿ ಅವರ ನಾಯಕತ್ವದಲ್ಲಿ ಅವರ ಸಿದ್ಧಾಂತ, ಆಡಳಿತದಲ್ಲಿ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಬೆಲೆ ಏರಿಕೆ, ಆರ್ಥಕ ಅಸಮಾನತೆ, ಜಿಎಸ್ಟಿಗಳಿಂದ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ. ಇನ್ನು ಮೋದಿ ಅವರ ನಾಯಕತ್ವದಲ್ಲಿ ಸಾಮಾಜಿಕ ಧೃವೀಕರಣ ಹೆಚ್ಚುತ್ತಿದ್ದು, ಜಾತಿ, ಧರ್ಮ, ಭಾಷೆ, ಆಹಾರ, ಉಡುಗೆ ವಿಚಾರದಲ್ಲಿ ಸಮಾಜ ಒಡೆಯಲಾಗುತ್ತಿದೆ. ಕೇವಲ ಚುನಾವಣೆ ಗೆಲ್ಲಲು ಇವುಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಕರ್ನಾಟಕ ತಾಜಾ ಉದಾಹರಣೆ. ಇನ್ನು ಮೋದಿ ಆಡಳಿತದಲ್ಲಿ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುತ್ತಿದ್ದು, ಸಂವಿಧಾನ ತನ್ನ ಹಿಡಿತ ಕಳೆದುಕೊಳ್ಳುತ್ತಿದೆ. ಸಂವಿಧಾನಿಕ ಸಂಸ್ಥೆಗಳು ದುರ್ಬಲಗೊಂಡಿದ್ದು, ಎಲ್ಲ ಆಡಳಿತ ಶಕ್ತಿಕೇಂದ್ರಗಳ ಓರ್ವ ವ್ಯಕ್ತಿ ನಿಯಂತ್ರಣದಲ್ಲಿದೆ. ಅವರು ಸರ್ವಜ್ಞಾನಿ, ಸ್ವರ್ವವ್ಯಾಪಿ, ಸರ್ವಶಕ್ತಿಮಾನವನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದವರು ತಿಳಿಸಿದರು.

ರಾಜ್ಯದಳ ಅಧಿಕಾರ ಕಸಿಯಲಾಗಿದೆ. ರಾಜ್ಯಗಳು ಬೇಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ನೆರವು ಕೇವಲ ಪ್ರಧಾನಿಯ ಪ್ರಚಾರಕ್ಕಾಗಿ ಇದೆ. ಇದರಲ್ಲಿ ಪ್ರಧಾನಮಂತ್ರಿಗಳ ಭಾವಚಿತ್ರಇಲ್ಲವಾದರೆ ವಿತ್ತ ಸಚಿವರಿಗೆ ಕೋಪ ಬರುತ್ತದೆ. ಕಾಂಗ್ರೆಸ್ ಪಕ್ಷ ಭಾರತ ಜೋಡಿಸಿದರೆ, ಭಾರತವನ್ನು ಒಡೆಯುತ್ತಿರುವವರು ಮೋದಿ ಅವರ ಸಿದ್ಧಾಂತ, ಆಡಳಿತ. ಈ ಕಾರಣಗಳಿಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆ ನಡೆಯುತ್ತಿದೆ. 12 ರಾಜ್ಯಗಳಲ್ಲಿ ಈ ಯಾತ್ರೆ ಸಾಗಲಿದ್ದು, ಹಲವು ರಾಜ್ಯಗಳಲ್ಲಿ ಈ ಯಾತ್ರೆ ಸಾಗದ ಕಾರಣ ಯಾತ್ರೆ ಸಾಗದ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಭಾರತ ಜೋಡೋ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಜೋಡೋ ಯಾತ್ರೆ ಬಿಜೆಪಿ ಚಿತ್ತಗೆಡಿಸಿದ್ದು, ಬಿಜೆಪಿ ಸುಳ್ಳು ಸುದ್ದಿಗಳ ಮೂಲಕ ಈ ಯಾತ್ರೆಯನ್ನು ಟೀಕಿಸುತ್ತಿದೆ. ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಚಿಂತೆಗೀಡು ಮಾಡಿದೆ. ಈ ಯಾತ್ರೆಯಿಂದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಶಕ್ತಿಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅವರಿಗೆ ಮನದಟ್ಟಾಗಿದೆ. ರಾಹುಲ್ ಗಾಂಧಿ ಅವರು ಪ್ರತಿನಿತ್ಯ ನಾಗರೀಕ ಸಮಾಜಕ ಒಂದೊಂದು ವರ್ಗಗಳ ಜತೆ ಸಂವಾದ ನಡೆಸಲಿದ್ದಾರೆ. ಇಂದು ಅವರು ಆದಿವಾಸಿಗಳು ಹಾಗೂ ಕೋವಿಡ್ ಸಮಯದಲ್ಲಿ ಜೀವನಕ್ಕೆ ಆಸರೆಯಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡ ಕುಟುಂಬಗಳ ಸದಸ್ಯರ ಜತೆ ಮಾತುಕತೆ ನಡೆಸಿದರು ಎಂದು ನುಡಿದರು.

ಅ.4-5ರಂದು ದಸರಾ ಹಬ್ಬದ ಪ್ರಯುಕ್ತ ಈ ಯಾತ್ರೆಗೆ ಬಿಡುವು ನೀಡಲಾಗುವುದು. 6ರಿಂದ ಮತ್ತೆ ಈ ಯಾತ್ರೆ ಪುನರಾರಂಭವಾಗಲಿದೆ. ಭಾರತ ಜೋಡೋ ಯಾತ್ರೆ ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಾಗಿದ್ದು, ಇದು ಬ್ಲಾಕ್, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪಕ್ಷ ಸಂಘಟನೆಗೆ ಶಕ್ತಿ ತುಂಬುತ್ತಿದೆ. ಈ ಯಾತ್ರೆ ಮೂಲಕ ಒಂದು ದೃಷ್ಟಿಕೋನ ನೀಡುತ್ತಿದ್ದು, ಇದು ಕಾಂಗ್ರೆಸ್ ಪಾಲಿಗೆ ಶಕ್ತಿಯಾಗಿದೆ. ಬೇರೆ ರಾಜ್ಯಗಳಲ್ಲಿ ಆಗಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಜ. ಇದು ವಿಶ್ವದಲ್ಲೇ ರಾಜಕೀಯ ಪಕ್ಷದಿಂದ ಕೈಗೊಂಡಿರುವ ಅತ್ಯಂತ ದೊಡ್ಡ ಯಾತ್ರೆಯಾಗಿದೆ. ಇದು ದೇಶದ ರಾಜಕಾರಣದಲ್ಲಿ ಬದಲಾವಣೆ ತರಲಿದೆ ಎಂದು ಸಾಂಧರ್ಬಿಕವಾಗಿ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಅವರು ಇಂದು ಬುಡಕಟ್ಟು ಜನರ ಜತೆ ಸಂವಾದ ಮಾಡುತ್ತಾ, ‘ಇಂದು ವಿಶ್ವ ಹವಾಮಾನ ವೈಪರಿತ್ಯದ ಸಮಸ್ಯೆ ಎದುರಿಸುತ್ತಿದ್ದು, ನಮ್ಮ ಪರಿಸರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಅಂಶವನ್ನು ಬುಡಕಟ್ಟು ಜನರನ್ನು ಕಲಿಯಬೇಕು. ಈ ವಿಚಾರದಲ್ಲಿ ಬುಡಕಟ್ಟು ಜನರಿಗೆ ಇರುವ ಜ್ಞಾನ ನಮಗಿಲ್ಲ. ಅವರು ಶತಮಾನಗಳಿಂದ ಅರಣ್ಯದ ಜತೆ ಸಾಮರಸ್ಯದ ಬದುಕು ಸಾಗಿಸಿದ್ದಾರೆ. ಭಾರತ ತನ್ನ ಅರಣ್ಯ ಹಾಗೂ ಪರಿಸರವನ್ನು ನಿಭಾಯಿಸುವುದನ್ನು ಕಲಿಯಬೇಕಾದರೆ ಬುಡಕಟ್ಟು ಜನರಿಂದ ಕಲಿಯಬೇಕು’ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿ ಅವರು ಇಂದು ಎರಡು ಸಂವಾಧ ಕಾರ್ಯಕ್ರಮ ಮಾಡಿದ್ದು, ಒಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಜತೆ ನಡೆಯಿತು. ಇಲ್ಲಿ ಸದಸ್ಯರು ರಾಹುಲ್ ಗಾಂಧಿ ಅವರ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಪ್ರಮುಖ ಬೇಡಿಕೆಗಳೆಂದರೆ, ಸೋಲಿಗ ಸಮಾಜದವರು ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಶೋಷಿತ ಆದಿವಾಸಿಗಳ ಪಟ್ಟಿಯಲ್ಲಿ ಇರಬೇಕು ಎಂದು ಹಲವು ವರ್ಷಗಳ ಬೇಡಿಕೆ ಹೊಂದಿದ್ದಾರೆ. ಮೋದಿ ಸರ್ಕಾರ ಆಸ್ವಾಸನೆ ನೀಡಿದ್ದರೂ ಇದುವರೆಗೂ ಮಾಡಿಲ್ಲ, ಇದನ್ನು ಸಂಸತ್ ಅಧಿವೇಶನದಲ್ಲಿ ತರಬೇಕು. ಅರಣ್ಯ ಸಂರಕ್ಷಣಾ ಕಾಯ್ದೆ ಅಢಿಯಲ್ಲಿ ಬಿ.ಆರ್ ಹಿಲ್ಸ್, ಸೇರಿದಂತೆ ಇತರೆ ಹುಲಿಸಂರಕ್ಷಿತ ಪ್ರದೇಶಗಳಲ್ಲಿ ಸಣ್ಣ ಅರಣ್ಯ ಉತ್ಪನ್ನ ಮಾಡಲು ಅವಕಾಶ ನೀಡಲಾಗಿತ್ತು. ಬಂಡಿಪುರ ಹೊರತಾಗಿ ಬೇರೆ ಕಡೆಗಳಲ್ಲಿ ಅನುಮತಿ ನೀಡಿದ್ದು, ಅಲ್ಲಿಯೂ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಣಾ ವಲಯ ಮಾಡುವ ಪ್ರಸ್ತಾವ ನೀಡಿದ್ದು, ಇದನ್ನು ಕೈಬಿಡಬೇಕು. ಈ ಪ್ರದೇಶದಲ್ಲಿ 15-20 ಸಾವಿರ ಸೋಲಿಗ ಸಮುದಾಯದವರು ವ್ಯವಸಾಯ ಮಾಡುತ್ತಿದ್ದಾರೆ. ಅರಣ್ಯವನ್ನೆ ಅವರು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸಮಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಕೇಳಿದಾಗ ಅದರ ಆಶ್ವಾಸನೆ ನೀಡಲಾಗಿದೆ. ಯುಪಿಎ ಸರ್ಕಾರದಲ್ಲಿ ಐಸಿಡಿಎಸ್ ಯೋಜನೆ ಮೂಲಕ ಈ ಭಾಗದ ಮಕ್ಕಳಿಗೆ ನೀಡಲಾದಗುತ್ತಿರುವ 6 ತಿಂಗಳ ಪೌಷ್ಠಿಕ ಆಹಾರವನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದು, ಈಗ ಆ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ವಿಚಾರವಾಗಿ ಹೋರಾಟ ಮಾಡುವುದಾಗಿ ತಿಳಿಸಿದೆ. ಇನ್ನು ಜೇನು ಕುರುಬ ಸಮುದಾಯದವರು ಕಾಡಿನಿಂದ ಜೇನು ತಂದು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಇನ್ನು ಎರಡನೇ ಸಂವಾದದಲ್ಲಿ ಈ ಸರ್ಕಾರದ ನಿರ್ಲಕ್ಷ್ಯ ಹಾಗೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಕುಟುಂಬ ಸದಸ್ಯರ ಜತೆ ಮಾತನಾಡಿ ಅವರ ನೋವು ಹಂಚಿಕೊಂಡರು. ಅವರು ಮೂರು ಬೇಡಿಕೆ ಇಟ್ಟಿದ್ದು, ಈ ಸರ್ಕಾರ ಇವರ ನಿರ್ಲಕ್ಷ್ಯದಿಂದ ಯಾರು ಸತ್ತಿಲ್ಲ ಎಂದು ಸತ್ಯವನ್ನು ಮರೆಮಾಚುತ್ತಿದ್ದಾರೆ. ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಕೇಳಿದ್ದು, ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಇವರ ನೆರವಿಗೆ ಬಾರದಿದ್ದಾಗ ನಮ್ಮ ಅಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ಹೋಗಿ ಅವರ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ತಮ್ಮ ಕುಟುಂಬದ ಆಧಾರಸ್ತಂಭ ಕಳೆದುಕೊಂಡಿದ್ದು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆ ಇಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕೆಲಸ ಮಾಡಲಾಗುವುದು ಎಂದು ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದರು.

ಈ ಸಂವಾದ ನಂತರ ಮುಂದೆ ಬುಡಕಟ್ಟು ಜನರಿಗೆ ಯಾವ ರೀತಿಯ ನೆರವು ನೀಡಬೇಕು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಮೂಲಸೌಕರ್ಯ ಕಲ್ಪಿಸಬೇಕು ಎಂಬ ವಿಚಾರ ಗಮನಕ್ಕೆ ಬಂದಿದೆ. ನಮ್ಮ ನಾಯಕರ ಪರವಾಗಿ ಈ ತಂಡಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

Join Whatsapp