ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ಡಿಸೆಂಬರ್ 31ರೊಳಗೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶವನ್ನು ಆಮ್ ಆದ್ಮಿ ಪಾರ್ಟಿ ಸ್ವಾಗತಿಸಿದ್ದು, ಬಿಜೆಪಿಗೆ ತಾಕತ್ತಿದ್ದರೆ ಚುನಾವಣೆ ಮುಂದೂಡಲು ನೆಪ ಹುಡುಕುವ ಬದಲು ಈ ಆದೇಶವನ್ನು ಪಾಲಿಸಲಿ ಎಂದು ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಸವಾಲು ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, “ಮೀಸಲಾತಿಗೆ ಸಂಬಂಧಿಸಿ ಅನಗತ್ಯ ಗೊಂದಲ ಸೃಷ್ಟಿಸಿ ಚುನಾವಣೆಯನ್ನು ಮುಂದೂಡಲು ಬಿಜೆಪಿ ಯತ್ನಿಸುತ್ತಿದೆ. ಚುನಾವಣೆಯಲ್ಲಿ ಸೋಲುವುದು ನಿಶ್ಚಿತವೆಂದು ತಿಳಿದಿದ್ದರಿಂದ ಬಿಜೆಪಿಯು ಈ ರೀತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ವರ್ತಿಸುತ್ತಿದೆ. 2020ರಲ್ಲಿ ನಡೆಯಬೇಕಿದ್ದ ಚುನಾವಣೆಯು ಇನ್ನೂ ನಡೆಯದಿರುವುದು ಗಮನಿಸಿದರೆ ಬಿಜೆಪಿಯ ಭಯ ಹಾಗೂ ಚುನಾವಣೆ ನಡೆಸದೇ ಅಧಿಕಾರ ಅನುಭವಿಸುವ ದುರಾಸೆ ತಿಳಿಯುತ್ತದೆ” ಎಂದು ಹೇಳಿದರು.
“ಬೆಂಗಳೂರಿನಾದ್ಯಂತ ಆಮ್ ಆದ್ಮಿ ಪಾರ್ಟಿಗೆ ಜನಬೆಂಬಲ ಹೆಚ್ಚಾಗುತ್ತಿರುವುದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ಪ್ರಾಮಾಣಿಕ ಆಡಳಿತವನ್ನು ತರಬೇಕೆಂಬ ಬೆಂಗಳೂರಿಗರ ನಿಲುವನ್ನು ಸಹಿಸಿಕೊಳ್ಳಲು ಬಿಜೆಪಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಒಂದಿಲ್ಲೊಂದು ಕುತಂತ್ರಗಳನ್ನು ಮಾಡಿ ಚುನಾವಣೆಯನ್ನು ಎರಡು ವರ್ಷಗಳ ಕಾಲ ಮುಂದೂಡಿದೆ. ಆಮ್ ಆದ್ಮಿ ಪಾರ್ಟಿಯು ಚುನಾವಣೆಗೆ ಸಿದ್ಧವಾಗಿದ್ದು, ಯಾವಾಗ ಚುನಾವಣೆ ನಡೆದರೂ ನಾವೇ ಗೆಲ್ಲಲಿದ್ದೇವೆ. ಬಿಜೆಪಿ ಸರ್ಕಾರವು ಹೈಕೋರ್ಟ್ ಆದೇಶದಂತೆ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸುವ ತಾಕತ್ತು ಪ್ರದರ್ಶಿಸಲಿ” ಎಂದು ಮೋಹನ್ ದಾಸರಿ ಹೇಳಿದರು.