ಚಾಮರಾಜನಗರ: ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ನೀವು ಅವರ ಜತೆ ಶಾಮೀಲಾದರೆ ನಿಮಗೆ ತಕ್ಕ ಪಾಠ ಕಲಿಸುವ ಕಾಲ ಬರಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಚಾಲನೆ ನೀಡಿ, ಮಾತನಾಡಿದರು.
‘ರಾಹುಲ್ ಗಾಂಧಿ ಅವರು ಈಗಾಗಲೇ ಕೇರಳ ಹಾಗೂ ತಮಿಳುನಾಡಿನಲ್ಲಿ ಪಾದಯಾತ್ರೆ ಮುಗಿಸಿ ಇಂದು ಕರ್ನಾಟಕದಲ್ಲಿ ಗುಂಡ್ಲುಪೇಟೆ ಮೂಲಕ ಪಾದಯಾತ್ರೆ ಆರಂಭಿಸಲಿದ್ದಾರೆ. ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ 510 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಇಡೀ ದೇಶದಲ್ಲಿ ಸುಮಾರು 3570 ಕಿ.ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ನಂತರ ಇಷ್ಟು ದೊಡ್ಡ ಪ್ರಮಾಣದ ಪಾದಯಾತ್ರೆ ಮಾಡುತ್ತಿರುವುದು ಇದೇ ಮೊದಲು. ಬೇರೆ ಯಾವ ಪಕ್ಷಗಳು ಅಥವಾ ನಾಯಕರು ಈ ರೀತಿ ಮಾಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ರಾಹುಲ್ ಗಾಂಧಿ ಅವರು ಕೋಮುವಾದಿ ರಾಜಕಾರಣದಿಂದ ಬೇಸತ್ತು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಧರ್ಮ ರಾಜಕಾರಣ, ಕೋಮುವಾದಿ ರಾಜಕಾರಣ, ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಇಂದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಎಲ್ಲ ವರ್ಗದವರು ಆತಂಕದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಸದಾ ಪ್ರಜಾಪ್ರಭುತ್ವದ ಮೇಲೆ ಸಂವಿಧಾನದ ಮೇಲೆ ನಂಬಿಕೆ ಗೌರವ ಇಟ್ಟುಕೊಂಡಿಲ್ಲ. ಅವರು, ಒಬ್ಬ ನಾಯಕ, ಒಂದು ಸಿದ್ಧಾಂತ, ಒಂದು ಚಿಹ್ನೆ ಮೇಲೆ ನಂಬಿಕೆ ಇಟ್ಟುಕೊಂಡಿರುವವರು. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಅದನ್ನು ಜಾರಿಗೆ ತಂದ ದಿನದಿಂದಲೂ ಇದನ್ನು ಬಿಜೆಪಿಯವರು ವಿರೋಧಿಸುತ್ತಲೇ ಇದ್ದಾರೆ. ಅನೇಕ ಬಾರಿ ಮಂತ್ರಿಗಳು, ಸಂಸದರು, ಬಿಜೆಪಿ ನಾಯಕರು ಸಂವಿಧಾನವನ್ನು ಬದಲಿಸುತ್ತೇವೆ, ಈ ಸಂವಿಧಾನ ಬೇಡ ಎಂದು ಹೇಳಿದ್ದಾರೆ. ಇದು ಬಿಜೆಪಿ ವರಿಷ್ಠರಿಗೆ ತಿಳಿದಿದೆ. ಹೀಗಾಗಿ ಬಿಜೆಪಿಗೆ ಪ್ರಜಾಪ್ರಭುತ್ವ, ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ಇಂತಹ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಹಿಂದೆ ವಾಜಪೇಯಿ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಸಂವಿಧಾನ ಬದಲಿಸಲು ಪ್ರಯತ್ನ ಮಾಡಿದ್ದರು. ಆಗ ರಾಷ್ಟ್ರಪತಿ ನಾರಾಯಣ್ ಅವರು ಇಲ್ಲದಿದ್ದರೆ ಬದಲಾವಣೆ ಆಗುತ್ತಿತ್ತೇನೋ. ದೇಶದಲ್ಲಿ ಶಾಂತಿ, ಸಾಮರಸ್ಯ ಇರಬಾರದು, ಧರ್ಮ, ಜಾತಿ ಆಧಾರದ ಮೇಲೆ ಜನರನ್ನು ವಿಭಜಿಸಿ ರಾಜಕೀಯ ಲಾಭ ಮಾಡುವುದು ಬಿಜೆಪಿ ಉದ್ದೇಶ. ಇದು ಮೋದಿ ಅವರು ಪ್ರಧಾನಿ ಆದ ನಂತರ ದೇಶದಲ್ಲಿ ಹೆಚ್ಚುತ್ತಿದೆ. ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧರಾಗಿರಬೇಕು. ಅದಕ್ಕಾಗಿ ಇಂದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ನಾಗರಿಕ ವೇದಿಕೆಗಳು, ಬರಹಗಾರರು, ಚಿಂತಕರು, ರೈತ ಸಂಘಗಳು ಎಲ್ಲರೂ ದೇಶ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದಲ್ಲಿ ಅಶಾಂತಿ ಜತೆಗೆ, ರೈತರು, ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರು, ಬೆಲೆ ಏರಿಕೆ ಸಮಸ್ಯೆ ವಿರುದ್ಧ ಹೋರಾಡಲು ಈ ಪಾದ್ಯಾತ್ರೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಜನಜನಿತವಾಗಿದೆ. ಇಂದು ದೇಶ, ಪ್ರಜಾತಂತ್ರ, ಸಂವಿಧಾನ ಉಳಿಯಬೇಕಾದರೆ, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಇದರ ನಾಯಕತ್ವವನ್ನು ರಾಹುಲ್ ಗಾಂಧಿ ಅವರು ವಹಿಸಿದ್ದು, ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆಗಳು ಎಂದು ಅವರು ಹೇಳಿದರು.
ಈ ಯಾತ್ರೆ ಯಶಸ್ವಿಯಾಗಬೇಕು. ಇದನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಪೋಸ್ಟರ್, ಫ್ಲೆಕ್ಸ್ ಹರಿಯುತ್ತಿದ್ದಾರೆ. ಅವರು ಇದೇ ರೀತಿ ಮುಂದುವರಿಸಿದರೆ ಬಿಜೆಪಿಯ ಯಾವುದೇ ನಾಯಕರು ರಾಜ್ಯದಲ್ಲಿ ತಿರುಗಾಡದಂತೆ ಮಾಡುವ ಶಕ್ತಿ ಕಾಂಗ್ರೆಸ್ ಕಾರ್ಯಕರ್ತರಿಗೆ ಇದೆ ಎಂದು ಎಚ್ಚರಿಸುತ್ತೇನೆ. ಇನ್ನು ಆರು ತಿಂಗಳ ನಂತರ ರಾಜ್ಯದಲ್ಲಿ ಸರ್ಕಾರ ಬದಲಾಗುತ್ತದೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೆಲವು ಪೊಲೀಸರಿಗೆ ಹೇಳಲು ಬಯಸುತ್ತೇನೆ. ನೀವು ಅವರ ಜತೆ ಶಾಮೀಲಾದರೆ ನಿಮಗೆ ತಕ್ಕ ಪಾಠ ಕಲಿಸುವ ಕಾಲ ಬರಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3570 ಕಿ.ಮೀ. ದೂರ ಹೆಜ್ಜೆ ಹಾಕುತ್ತಿದ್ದಾರೆ. ಈ ಹೆಜ್ಜೆ ರಾಷ್ಟ್ರಕ್ಕೆ ಕೊಡುಗೆ. ನಿಮ್ಮ ಹೆಜ್ಜೆ ಜತೆಗೆ ಒಂದು ಇತಿಹಾಸ ನಿರ್ಮಾಣವಾಗುತ್ತಿದೆ ಎಂದರು.
ಇಂದು ಐದು ವಿಚಾರಗಳ ಮೇಲೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವುದು, ಯುವಕರ ನಿರುದ್ಯೋಗ ಸಮಸ್ಯೆ ಪರಿಹಾರ, ರೈತರಿಗೆ ಗೌರವಯುತ ಆದಾಯ ಸಿಗುವಂತೆ ಮಾಡುವುದು, ರಾಜ್ಯದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ, ಜನ ಸಾಮಾನ್ಯರ ಬದುಕು ನರಕ ಮಾಡಿರುವ ಬೆಲೆ ಏರಿಕೆ ಜತೆಗೆ ಜನರ ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಆಕಾಶಕ್ಕೆ ಹೋಗುತ್ತಿರುವುದನ್ನು ತಡೆಯುವುದೇ ಆಗಿದೆ. ಈ ಎಲ್ಲ ಜನಪರ ಉದ್ದೇಶಗಳೊಂದಿಗೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ಸಮಿತಿ ಪರವಾಗಿ ರಾಹುಲ್ ಗಾಂಧಿ ಹಾಗೂ ಅವರ ಜತೆಗೆ ಹೆಜ್ಜೆ ಹಾಕುವ ಎಲ್ಲ ಯಾತ್ರಿಗಳಿಗೆ ಕೋಟಿ ಧನ್ಯವಾದಗಳು ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯರ ಮನದಲ್ಲಿ ಅಸೂಯೆ, ದ್ವೇಷ ಹೆಚ್ಚಿಸಿದ್ದು, ಇದನ್ನು ತೊಡೆದು ಹಾಕಬೇಕು, ಎಲ್ಲರನ್ನು ಒಗ್ಗೂಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಹತ್ತಿಕ್ಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಬದುಕು ರಕ್ಷಿಸಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಕಾಂಗ್ರೆಸ್ ಅವಿರತ ಶ್ರಮಿಸಲಿದೆ ಎಂದು ಅವರು ಹೇಳಿದರು.