ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಆರ್. ವೆಂಕಟರಮಣಿ ನೇಮಕ

Prasthutha|

ನವದೆಹಲಿ: ಹಿರಿಯ ವಕೀಲ ಆರ್ ವೆಂಕಟರಮಣಿ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಭಾರತದ ನೂತನ ಅಟಾರ್ನಿ ಜನರಲ್ ಆಗಿ ನೇಮಕಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಹಾಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಮುಂದಿನ ಅಟಾರ್ನಿ ಜನರಲ್ ಆಗುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಪಾಂಡಿಚೇರಿಯ ಸರ್ಕಾರಿ ಕಾನೂನು ಕಾಲೇಜಿನಲ್ಲಿ ದಿವಂಗತ ಪ್ರೊ. ಮಾಧವ ಮೆನನ್ ಅವರ ವಿದ್ಯಾರ್ಥಿಯಾಗಿದ್ದ ವೆಂಕಟರಮಣಿ, 1977ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು. 1979ರಲ್ಲಿ ದೆಹಲಿಗೆ ತೆರಳಿದ್ದ ಇವರು, ಹಿರಿಯ ವಕೀಲರಾದ ದಿವಂಗತ ಪಿಪಿ ರಾವ್ ಅವರ ಕಚೇರಿ ಸೇರಿ ವೃತ್ತಿ ಮಾಡುತ್ತಿದ್ದರು.

- Advertisement -

1997 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಕಗೊಂಡಿದ್ದ ಆರ್ ವೆಂಕಟರಮಣಿ, ಈ ಹಿಂದೆ 2010 ಮತ್ತು 2013 ರಲ್ಲಿ ಎರಡು ಅವಧಿಗೆ ಭಾರತದ ಕಾನೂನು ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವೆಂಕಟರಮಣಿ ಅವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದು, 45 ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದಾರೆ.

1990ರಲ್ಲಿ ವೆಂಕಟರಮಣಿ ಅವರು ಬರೆದ “ಜಸ್ಟೀಸ್ ಒ. ಚಿನ್ನಪ್ಪ ರೆಡ್ಡಿಯವರ ತೀರ್ಪುಗಳು(ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ)” ಎಂಬ ಪುಸ್ತಕಕ್ಕೆ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ ಅವರು ಮುನ್ನುಡಿ ಬರೆದಿದ್ದರು.



Join Whatsapp