ಆರ್.ಎಸ್.ಎಸ್ ಅನ್ನು ನಿಷೇಧಿಸಲು ಆಗ್ರಹ
ತಿರುವನಂತಪುರಂ: PFI ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ಕೇರಳದ ಕಾಂಗ್ರೆಸ್ ಹಾಗೂ ಮುಸ್ಲಿಮ್ ಲೀಗ್ ಪಕ್ಷ ಸ್ವಾಗತಿಸಿದೆ. PFI ಅನ್ನು ನಿಷೇಧಿಸಿದ ರೀತಿಯಲ್ಲೇ ಆರ್.ಎಸ್.ಎಸ್. ಅನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
PFI ಸಂಘಟನೆ ನಡೆಸುತ್ತಿರುವ ಚಟುವಟಿಕೆಗಳನ್ನು ಖಂಡಿಸಿದ ಮುಸ್ಲಿಮ್ ಲೀಗ್’ನ ಹಿರಿಯ ಮುಖಂಡ ಎಂ.ಕೆ. ಮುನೀರ್, ಈ ಸಂಘಟನೆಯು ಕುರ್’ಆನ್ ಅನ್ನು ತಪ್ಪಾಗಿ ವ್ಯಾಖ್ಯಾನ ಮಾಡಿದೆ ಮತ್ತು ಹಿಂಸಾಚಾರದ ಮಾರ್ಗವನ್ನು ಹಿಡಿಯಲು ಸಮುದಾಯದ ಯುವಕರನ್ನು ಪ್ರೇರೇಪಿಸಿದೆ ಎಂದು ಅವರು ಆರೋಪಿಸಿದ್ದಾರೆ.
PFI ಅನ್ನು ನಿಷೇಧಿಸುವ ಕೇಂದ್ರದ ನಿರ್ಧಾರವು ಒಂದು ಉತ್ತಮ ಬೆಳವಣಿಗೆ ಎಂದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಗೃಹ ಸಚಿವ ರಮೇಶ್ ಚೆನ್ನಿತ್ತಲ, PFI ಅನ್ನು ನಿಷೇಧಿಸಿದ ಮಾದರೀಯಲ್ಲೇ ಆರ್. ಎಸ್.ಎಸ್ ಅನ್ನು ಕೂಡ ನಿಷೇಧಿಸಬೇಕು. ಕೇರಳದಲ್ಲಿ ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದ ಎರಡನ್ನೂ ಸಮಾನವಾಗಿ ವಿರೋಧಿಸಬೇಕು. ಎರಡೂ ಸಂಘಟನೆಗಳು ಕೋಮು ದ್ವೇಷವನ್ನು ಹುಟ್ಟುಹಾಕಿ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸಿವೆ ಎಂದು ತಿಳಿಸಿದ್ದಾರೆ.