ನವದೆಹಲಿ: ಪಿ.ಎಫ್.ಐ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಿರುವ ಒಕ್ಕೂಟ ಸರ್ಕಾರದ ನಿರ್ಧಾರ ದೇಶದ ಸಂವಿಧಾನ ಪ್ರಜೆಗಳಿಗೆ ಖಾತರಿ ಪಡಿಸಿರುವ ಹಕ್ಕುಗಳಿಗೆ ನೀಡಿರುವ ಬಲವಾದ ಪೆಟ್ಟು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಹೇಳಿದರು.
ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಮತ್ತು ಆಡಳಿತದ ವಿರುದ್ಧ ಯಾರೇ ಧ್ವನಿಯೆತ್ತಿದರೂ ಸಹ ಅವರ ವಿರುದ್ಧ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿ ಅವರನ್ನು ಬಂಧಿಸಲಾಗುತ್ತಿದೆ. ವಾಕ್ ಸ್ವಾತಂತ್ರ್ಯ, ಪ್ರತಿಭಟನೆ ಮತ್ತು ಸಂಘಟನೆಯನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ಇದು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆ. ಈ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ಬೆದರಿಸುವ ಮತ್ತು ಪ್ರತಿರೋಧದ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಇದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.
ಇದರ ವಿರುದ್ಧ ಎಲ್ಲ ಜಾತ್ಯತೀತ ಪಕ್ಷಗಳು ಮತ್ತು ಜನರು ಈ ಸರ್ವಾಧಿಕಾರಿ ಸರ್ಕಾರದ ಧೋರಣೆಗಳ ವಿರುದ್ಧ ಪ್ರತಿರೋಧ ಒಡ್ಡಿ ಅದನ್ನು ಮೆಟ್ಟಿ ನಿಲ್ಲುವ ಮೂಲಕ ಈ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕರ್ತವ್ಯ ನಿರ್ವಹಿಸಬೇಕು ಎಂದು ಫೈಝಿ ಅವರು ಕರೆಕೊಟ್ಟಿದ್ದಾರೆ.