ಜೀವಂತ ಸಮಾಧಿಯಾದರೆ ಮೋಕ್ಷ ಸಿಗುತ್ತದೆ ಎಂದು ಹೇಳಿದ್ದ ಸ್ವಾಮೀಜಿಯ ಮಾತು ನಂಬಿ ಸಮಾಧಿ ಸೇರಿದ್ದ ಯುವಕನನ್ನು ಪೊಲೀಸರು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ಶುಭಂ ಕುಮಾರ್ ಎಂಬ 22 ವರ್ಷದ ಯುವಕ ತನ್ನ ಸ್ನೇಹಿತರ ಜೊತೆಗೂಡಿ ಸ್ವಾಮಿಜಿಯ ನಿರ್ದೇಶಾನುಸಾರ ತಾಜ್ಪುರ ಗ್ರಾಮದ ಹೊರಗೆ ಸಮಾಧಿ ತೋಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಿದದ ಲೀಸರು ಯುವಕನನ್ನು ಶುಭಂ ಕುಮಾರ್‌ನನ್ನು ಗುಂಡಿಯಿಂದ ಹೊರತೆಗೆದು ರಕ್ಷಿಸಿದ್ದಾರೆ. “ನವರಾತ್ರಿಯಂದು ಸಮಾಧಿ ಆದರೆ, ಮೋಕ್ಷ ಸಿಗಲಿದೆ. ಹಾಗಾಗಿ ನಾನು ಸಮಾಧಿ ಆಗಲು ಮುಂದಾಗಿದ್ದೆ” ಎಂದು ಶುಭಂ ಕುಮಾರ್ ಪೊಲೀಸರ ಬಳಿ ತಿಳಿಸಿದ್ದಾನೆ.
ಗುಂಡಿ ತೆಗೆದು ಅದರ ಒಳಗೆ ಯುವಕನನ್ನು ಇರಿಸಿ, ಅದರ ಮೇಲೆ ಬಿದಿರು ಮತ್ತು ಮಣ್ಣಿನಿಂದ ಮುಚ್ಚಿ ಗುಂಡಿಯ ಮೇಲೆ ಪೂಜೆ ಇತ್ಯಾದಿ ಹೋಮ ಹವನ ನಡೆಸಲಾಗುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲವನ್ನು ಕಿತ್ತೆಸೆದು ಯುವಕನನ್ನು ರಕ್ಷಿಸಿ ಗುಂಡಿಯಿಂದ ಮೇಲೆತ್ತುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಈ ವಿವಾದಾತ್ಮಕ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗಿದ್ದ ಸ್ಥಳೀಯ ಸಾಧುಗಳು ಮತ್ತು ಯುವಕ ಶುಭಂ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ” ಎಂದು ಅಸಿವಾನ್ ಪೊಲೀಸ್ ಠಾಣೆಯ ಅನುರಾಗ್ ಸಿಂಗ್ ತಿಳಿಸಿದ್ದಾರೆ.