ತಿರುವನಂತಪುರಂ: ಟೀಮ್‌ ಇಂಡಿಯಾ ಆಟಗಾರರ ಎದುರು ಸಂಜು ಸ್ಯಾಮ್ಸನ್‌ಗೆ ಅಭಿಮಾನಿಗಳ ಜೈಕಾರ

Prasthutha|

ತಿರುವನಂತಪುರಂ: ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿ ಗೆದ್ದ ಹುಮ್ಮಸ್ಸಿನಲ್ಲಿರುವ ಟೀಮ್‌ ಇಂಡಿಯಾ, ಬುಧವಾರದಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ದಕ್ಷಿಣ ಅಫ್ರಿಕಾ ತಂಡವನ್ನು ಎದುರಿಸಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ತಿರುವನಂತಪುರಂನಲ್ಲಿ ಸೆಪ್ಟಂಬರ್‌ 28ರಂದು ನಡೆಯಲಿದೆ. ಈಗಾಗಲೇ ಉಭಯ ತಂಡಗಳು ಕೇರಳದ ರಾಜಧಾನಿಗೆ ಆಗಮಿಸಿದ್ದು, ಅಭ್ಯಾಸದಲ್ಲಿ ತೊಡಗಿವೆ.

- Advertisement -

ಈ ನಡುವೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತೀಯ ಆಟಗಾರರಿಗೆ ಅಭಿಮಾನಿಗಳು ಸಂಜು, ಸಂಜು ಎಂದು ಗುಂಪಾಗಿ ಕೂಗುವ ಮೂಲಕ ವಿಭಿನ್ನ ಸ್ವಾಗತ ನೀಡಿದ್ದಾರೆ.

ಟೀಮ್‌ ಇಂಡಿಯಾದಲ್ಲಿ ವಿಕೆಟ್‌ ಕೀಪಿಂಗ್‌ ಸ್ಥಾನಕ್ಕೆ ರಿಷಭ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ. ಹೀಗಾಗಿ ಪ್ರತಿಭಾವಂತ ಆಟಗಾರ ಕೇರಳ ಮೂಲದ 27 ವರ್ಷದ ಸಂಜು ಸ್ಯಾಮ್ಸನ್‌ ಮುಖ್ಯ ತಂಡದಿಂದ ಹೊರಗುಳಿಯುವಂತಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಪ್ರಕಟಿಸಲಾಗಿರುವ 15 ಸದಸ್ಯರ ಭಾರತೀಯರ ತಂಡದಿಂದಲೂ ಸಂಜುರನ್ನು ಕೈ ಬಿಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಅಭಿಮಾನಿಗಳು ಅದರಲ್ಲೂ ವಿಶೇಷವಾಗಿ ಕೇರಳದವರು ಬಿಸಿಸಿಐ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

- Advertisement -

ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ತೋರ್ಪಡಿಸಿದ್ದ ಅಭಿಮಾನಿಗಳು, ಸೋಮವಾರ,  ಟೀಮ್‌ ಇಂಡಿಯಾ ಸದಸ್ಯರು   ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆಯಲ್ಲೂ ಪ್ರಕಟಿಸಿದರು.

ಸಂಜು ಮೇಲಿನ ಅಭಿಮಾನಿಗಳ ಪೀತಿಯನ್ನು ಪ್ರಮುಖ ಕ್ರಿಕೆಟಿಗರಾದ ಆರ್‌.ಅಶ್ವಿನ್‌, ಯಜುವೇಂದ್ರ ಚಹಾಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಬಸ್‌ನಲ್ಲಿದ್ದ ಸೂರ್ಯಕುಮಾರ್‌, ತಮ್ಮ ಮೊಬೈಲ್‌ನಲ್ಲಿ ಸಂಜು ಸ್ಯಾಮ್ಸನ್‌ ಫೋಟೋವನ್ನು ತೋರಿಸಿ ಅಭಿಮಾನಿಗಳನ್ನು ಖುಷಿಪಡಿಸಿದರು.

ಮಂಗಳವಾರ ಮುಕ್ತಾಯವಾದ ನ್ಯೂಜಿಲೆಂಡ್‌ ಎ ತಂಡದ ವಿರುದ್ಧದ ಸರಣಿಯಲ್ಲಿ ಭಾರತ ಎ ತಂಡವನ್ನು ಮುನ್ನಡೆಸಿದ್ದ ಸಂಜು ಸ್ಯಾಮ್ಸನ್‌, ಕ್ಲೀನ್‌ ಸ್ವೀಪ್‌ ಸಾಧನೆಯೊಂದಿಗೆ ಸಂಭ್ರಮಿಸಿದ್ದರು. ಮುಂಬರುವ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಸಂಜು ಭಾರತ ತಂಡಕ್ಕೆ ಆಯ್ಕಯಾಗುವುದು ಬಹುತೇಕ ಖಾತ್ರಿಯಾಗಿದೆ.

Join Whatsapp