ಜೈಪುರ: ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ಪಕ್ಷದ ಮುಖ್ಯಸ್ಥರ ಸ್ಪರ್ಧೆಯಿಂದ ರಾಜ್ಯ ಮುಖ್ಯಮಂತ್ರಿಯನ್ನು ಹೊರಗಿಟ್ಟು ಉನ್ನತ ಹುದ್ದೆಗೆ ಇನ್ನೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಕ್ಕಟ್ಟು ಪೀಡಿತ ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಗೆಹ್ಲೋಟ್ ಪಾಳೆಯದ ಶಾಸಕರ ನಡವಳಿಕೆಯಿಂದ ಅಸಮಾಧಾನಗೊಂಡ ಸಿಡಬ್ಲ್ಯೂಸಿ ಸದಸ್ಯರು ಅವರ ವಿರುದ್ಧ ಪಕ್ಷದ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಅವರಲ್ಲಿ ನಂಬಿಕೆ ಇಡುವುದು ಮತ್ತು ಪಕ್ಷದ ಹೊಣೆಗಾರಿಕೆ ನೀಡುವುದು ಉತ್ತಮವಲ್ಲ, ಪಕ್ಷದ ಉನ್ನತ ನಾಯಕರು ಗೆಹ್ಲೋಟ್ ಸ್ಪರ್ಧೆಯನ್ನು ಮರು ಪರಿಗಣಿಸಬೇಕು, ಗಾಂಧಿ ಕುಟುಂಬಕ್ಕೆ ನಿಷ್ಠರಾದ ಮತ್ತೋರ್ವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಸದಸ್ಯರು ಸೋನಿಯಾ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕೆನ್ ಅವರನ್ನು ಭಾನುವಾರ ಜೈಪುರಕ್ಕೆ ಕಳುಹಿಸಲಾಗಿತ್ತು. ಆದರೆ ಗೆಹ್ಲೋಟ್ ಬಣದ ಶಾಸಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ ಪಿ) ಸಭೆಗೆ ಹಾಜರಾಗಿರಲಿಲ್ಲ.
ಪಕ್ಷದ ಇತರ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಮುಕುಲ್ ವಾಸ್ನಿಕ್ ಅವರಂತಹ ಕೆಲವು ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊರಹೊಮ್ಮಿವೆ.
ಪಕ್ಷದ ಉನ್ನತ ಹುದ್ದೆಯ ರೇಸ್ ನಲ್ಲಿರುವ ಶಶಿ ತರೂರ್ ಅವರು ಸೆಪ್ಟೆಂಬರ್ 30 ರಂದು ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.