ಪ್ರೀತಿಯ ತಂದೆ ಒಎಂಎ ಸಲಾಂ ಸಾಹಿಬ್ ಅವರಿಗೆ ಮಗಳ ಪತ್ರ
ಅಸ್ಸಲಾಮು ಅಲೈಕುಮ್
ಕ್ಷಮಿಸಿ ಬಾಪಾ…
ನೀವು ನನ್ನನ್ನು ಮರೆತು ಬಿಟ್ರಲ್ಲಾ…
ಬೇಡ… ನಾನಿನ್ನು ಮಾತಾಡೋದೇ ಇಲ್ಲ
ಕೊನೆಯದಾಗಿ ನಾನು ತಂದೆಗೆ ಕಳುಹಿಸಿದ ಸಂದೇಶವಾಗಿತ್ತದು…
ಹಲವು ಬಾರಿ ಫೋನಾಯಿಸಿಯೂ ಕರೆ ಸ್ವೀಕರಿಸದಿರುವುದರಿಂದ ಸುಮ್ನೆ ತಮಾಷೆಗೆ ಹೇಳಿದೆ ಅಷ್ಟೇ…
ದಿನಾ ಬೆಳಗಾಗುತ್ತಲೇ ಫೋನಲ್ಲಿ ತುಸು ಗಲಾಟೆ ಮಾಡಿಕೊಳ್ಳುತ್ತಿದ್ದ ನಮಗೆ ಇಂದು ಅದು ಸಾಧ್ಯವಾಗಿರಲಿಲ್ಲ.
ಹಿತೈಷಿಯೊಬ್ಬರು ಕರೆ ಮಾಡಿ ಬೆಳಗ್ಗೆ ನಡೆದ ಘಟನೆಯ ಬಗ್ಗೆ ತಿಳಿಸಿದಾಗ ಗರ ಬಡಿದಂತಾಗಿತ್ತು.
ಯಾವುದೇ ಕ್ಷಣದಲ್ಲಿ ಬಂಧಿಸಲ್ಪಡಬಹುದು. ಸಂಘಟನೆಯನ್ನು ನಿಷೇಧಿಸಬಹುದು ಎಂದು ಗೊತ್ತಿದ್ದರಿಂದಲೇ ನನಗೆ ಯಾವುದೇ ಭಾವೋದ್ವೇಗ ಉಂಟಾಗಲಿಲ್ಲ..
ಇದು ನಾವು ಮೊದಲೇ ನಿರೀಕ್ಷಿಸಿದ್ದೆವು ಅಲ್ವಾ…?
“ಏನೇ…? ತಂದೆ ಬಂಧಿಸಲ್ಪಟ್ಟರೂ ಏನೂ ಆಗದವಳಂತೆ ಇದ್ದೀಯಲ್ಲಾ ನೀನು. ಬೇಗ ಮನೆಗೆ ಹೋಗು. ಮನೆಯಲ್ಲಿ ಎಲ್ಲರೂ ದುಃಖದಲ್ಲಿರಬಹುದು.” ಎಂದು ಜೊತೆಯಲ್ಲಿರುವವರು ಹೇಳುವಾಗ ನನಗೆ ಒಳಗೊಳಗೇ ನಗು ಬರ್ತಿತ್ತು.
“ಅಲ್ಲಲ್ಲ…ಅವಳನ್ನು ಬೆಳೆಸಿರೋದು ಅವಳ ತಂದೆ ಒಎಂಎ ಸಲಾಂ…ಅದು ಬೆಂಕಿಯಲ್ಲಿ ಅರಳಿದ ಹೂವು ಬಿಸಿಲಿಗೆ ಬಾಡದು” ಎಂದು ನನಗೆ ತಿಳಿ ಹೇಳಿದವರೇ ತಮ್ಮ ಮಾತನ್ನು ತಿದ್ದಿ ಹೇಳಿದಾಗ ಅಭಿಮಾನ ಮೂಡಿತು.
ಬಾಪಾ…ನೀವು ನನಗೆ ಯಾವತ್ತೂ ಒಂದು ಅದ್ಭುತ…ಎಲ್ಲರೂ ತಮ್ಮ ಮಕ್ಕಳಿಗೆ ಪುಸ್ತಕ ಓದಲು ಕಲಿಸುತ್ತಿರುವಾಗ, ನೀವು ಮಾತ್ರ ನಮಗೆ ಬರಹದ ಸಾಲುಗಳ ನಡುವೆ ಓದಲು ಕಲಿಸಿದಿರಿ. ಎಲ್ಲರೂ ನಮ್ಮ ಮಕ್ಕಳನ್ನು ಗೆಲ್ಲುವಂತೆ ಪ್ರೋತ್ಸಾಹಿಸುತ್ತಿರುವಾಗ, ನೀವು ನಮಗೆ ಸೋಲನ್ನು ಎದುರಿಸುವುದನ್ನು ಕಲಿಸಿದಿರಿ. ಧೈರ್ಯದಿಂದ ಹಕ್ಕುಗಳನ್ನು ಕೇಳಿ ಪಡೆಯಲು ಕಲಿಸಿದಿರಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಕಲಿಸಿದಿರಿ. ಪಠ್ಯ ಪುಸ್ತಕಗಳಾಚೆಗಿನ ಪ್ರಪಂಚವನ್ನು ಕಲಿಸಿದಿರಿ.
ಬಾಪಾ.. ನೀವು ಯಾವತ್ತೂ ಹೆಮ್ಮೆ ಪಡಬಹುದು.. ಈ ಬಂಧನಕ್ಕೆ ಭಾವುಕರಾಗಿ ಇಲ್ಲಿ ಯಾರೂ ಒಂದು ಹನಿ ಕಣ್ಣೀರು ಹಾಕಿಲ್ಲ. ಅಟ್ಟಹಾಸ ಮೆರೆಯುತ್ತಾ ಬಂದ ಕೇಸರಿ ಪೊಲೀಸರ ಮುಂದೆ ಯಾರೂ ಅಂಗಲಾಚಲಿಲ್ಲ. ಅತ್ತು ಸುಸ್ತಾಗಲಿಲ್ಲ. ನೆತ್ತಿಗೆ ಒತ್ತಿಯಿಟ್ಟ ಬಂದೂಕು ಕಂಡು ಹಿಂದಡಿಯಿಡಲಿಲ್ಲ. ಲಾಠಿಯ ಗಾಯಗಳು ನಮ್ಮನ್ನು ಕುಗ್ಗಿಸಲಿಲ್ಲ. ಅದು ಅವರಿಂದ ಸಾಧ್ಯವೂ ಇಲ್ಲ.
ಬಾಪಾ.. ನಮ್ಮ ಮುಂದಿನ ಪಯಣಕ್ಕೆ ನೀವು ನಮ್ಮಲ್ಲಿ ಬಿತ್ತಿ ಬೆಳೆಸಿದ ಮೌಲ್ಯಗಳೇ ಸಾಕು.
ನೀವು ಧೈರ್ಯವಾಗಿರಿ.
ನಮ್ಮನ್ನು ನೋಡಿಕೊಳ್ಳುವ ಶಕ್ತಿಯೊಂದು ಮೇಲಿದೆ.
ಮುಂದಕ್ಕೆ ಇಟ್ಟಿರುವ ಈ ಹೆಜ್ಜೆಗಳನ್ನು ಎಂದಿಗೂ ಹಿಂದೆ ಇಡಲಾರೆವು.
ನ್ಯಾಯಕ್ಕೆ ಗೆಲುವಾಗುವ ಒಂದು ದಿನ ಮುಂದೆ ಬರಲಿದೆ. ಅಂದು ಅಹಂಕಾರಿಗಳ ಅಧಿಕಾರದ ಗದ್ದುಗೆಗಳು ಕೆಳಗುರುಳಲಿವೆ.
ಇನ್ಶಾ ಅಲ್ಲಾಹ್ …
ಶೀಘ್ರದಲ್ಲೇ ಭೇಟಿಯಾಗೋಣ…
ಇತೀ ,
ತಝ್ಕಿಯಾ ಸಲಾಂ