ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಲು ಕರೆ ನೀಡಿದೆ.
ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ಕಡೆ ಹೆದ್ದಾರಿ ಸಂಪರ್ಕವನ್ನು ಇಂದು ಬೆಳಗ್ಗೆ 9 ಗಂಟೆಯಿಂದಲೇ ಬಂದ್ ಮಾಡಲು ರೈತ ಸಂಘದ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದು, ಇದು ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಯ ಸಮಯದಲ್ಲಿ ಮೈಸೂರಿಗೆ ಬರಲಿರುವ ಪ್ರವಾಸಿಗರಿಗೆ ತುಂಬಾ ಸಮಸ್ಯೆಯಾಗಲಿದೆ.
ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿ, ಕೆ.ಆರ್.ಎಸ್ ಸುತ್ತಮುತ್ತ ಶಾಶ್ವತ ಗಣಿಗಾರಿಕೆ ನಿಲ್ಲಿಸಬೇಕು ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡಿದ್ದ ರೈತ ಸಂಘ, ದಸರಾ ಹಬ್ಬದೊಳಗೆ ದರ ಘೋಷಣೆಗೆ ಕಾಲಾವಕಾಶ ನೀಡಿತ್ತು. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ಬಂದ್ ಮಾಡಲು ಮುಂದಾಗಿದೆ. ಹಸು, ಕುರಿ, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ಗಳೊಂದಿಗೆ ರಸ್ತೆಯಲ್ಲೇ ಪ್ರತಿಭಟಿಸಲು ರೈತ ಸಂಘದ ಕಾರ್ಯಕರ್ತರು ಸಿದ್ಧವಾಗಿದ್ದಾರೆ.