ಮೈಸೂರು ಗ್ಯಾಂಗ್ ರೇಪ್ ಪ್ರಕರಣದ 7 ನೇ ಆರೋಪಿ ಸೆರೆ

Prasthutha|

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 7ನೇ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಈಗಾಗಲೇ 6 ಮಂದಿ ಕಾಮುಕರನ್ನು ಬಂಧಿಸಿದ್ದ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಇಂದು ಮುಂಜಾನೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -


ಈ ನಡುವೆ ಕಳೆದ ಆ.24ರಂದು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರು ಮಂದಿ ಆರೋಪಿಗಳನ್ನು 3ನೇ ಜೆಎಂಎಫ್ ಸಿ ನ್ಯಾಯಾಲಯವು 10ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿತ್ತು. ಪೊಲೀಸ್ ಕಸ್ಟಡಿ ವೇಳೆ ತೀವ್ರ ವಿಚಾರಣೆ ನಡೆಸಿ ಆರೋಪಿಗಳ ಸ್ಥಳ ಮಹಜರು ನಡೆಸಲಾಗಿತ್ತು. ವಿಚಾರಣೆಯಲ್ಲಿ ಆರೋಪಿಗಳು ಕೃತ್ಯ ನಡೆಸಿರುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.


ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದು ಅವರ ಜೊತೆಗೆ ಇಂದು ಬಂಧಿತನಾಗಿರುವ ಮತ್ತೊಬ್ಬ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಬಂಧಿತ ಆರೋಪಿಗಳು ನಗರದ ಜನನಿಬಿಡ ಸ್ಥಳಗಳಲ್ಲಿ ಹಿಂದೆಯೂ ರಾಬರಿ, ಸರಗಳ್ಳತನ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ನಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

- Advertisement -


ಹಣ, ಚಿನ್ನಾಭರಣಗಳನ್ನು ಕಳೆದುಕೊಂಡವರು ಮರ್ಯಾದೆಗೆ ಅಂಜಿ ದೂರು ನೀಡುತ್ತಿರಲಿಲ್ಲ. ಆರೋಪಿಗಳು ಅದನ್ನೇ ಪ್ಲಸ್ ಪಾಯಿಂಟ್ ಮಾಡಿಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು ಎಂಬ ಸಂಗತಿ ವಿಚಾರಣೆಯಲ್ಲಿ ಗೊತ್ತಾಗಿದೆ.
ತಮಿಳುನಾಡಿನಿಂದ ಮೈಸೂರಿಗೆ ತರಕಾರಿ, ಬಾಳೆಕಾಯಿ ಗಾಡಿಗಳ ಜೊತೆ ಬರುತ್ತಿದ್ದ ಇವರು ಕೂಲಿ ಕೆಲಸಗಳನ್ನು ಮಾಡುತ್ತಿದ್ದರು. ಕೆಲಸ ಮುಗಿದ ನಂತರ ಮೈಸೂರಿನ ನಿರ್ಜನ ಪ್ರದೇಶಗಳು ಹಾಗೂ ಚಾಮುಂಡಿಬೆಟ್ಟದ ತಪ್ಪಲಿಗೆ ಸಂಜೆಯ ವೇಳೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂಟಿಯಾಗಿ ಬರುತ್ತಿದ್ದವರನ್ನು ಹೆದರಿಸಿ ಅವರ ಬಳಿ ಇರುತ್ತಿದ್ದ ಚಿನ್ನ, ಹಣ, ಮೊಬೈಲ್ಗಳನ್ನು ಕಸಿದುಕೊಂಡು ಕಳುಹಿಸುತ್ತಿದ್ದರು.

Join Whatsapp