ಕೊಚ್ಚಿ: ಕೇರಳ ರಾಜ್ಯದ ನಿರ್ಮಲ್ ಲಾಟರಿಯಲ್ಲಿ 70 ಲಕ್ಷ ಬಹುಮಾನ ಗೆದ್ದ ವ್ಯಕ್ತಿ ನೇರವಾಗಿ ತೆರಳಿದ್ದು ಪೊಲೀಸ್ ಠಾಣೆಗೆ. ಅಷ್ಟೇ ಅಲ್ಲ ಆ ದಿನ ರಾತ್ರಿಯನ್ನೂ ಠಾಣೆಯಲ್ಲೇ ಕಳೆದಿದ್ದಾನೆ. ವಿಚಿತ್ರವಾದರೂ ಇದು ಸತ್ಯ.
ಪಶ್ಚಿಮ ಬಂಗಾಳ ಮೂಲದ ಇಮಾಮ್ ಹುಸೇನ್ ಎಂಬಾತನಿಗೆ ಕೇರಳ ರಾಜ್ಯದ ನಿರ್ಮಲ್ ಲಾಟರಿಯಲ್ಲಿ 70 ಲಕ್ಷ ಬಹುಮಾನ ಬಂದಿತ್ತು. ವಿಷಯ ತಿಳಿದ ಕೂಡಲೇ ಸಂಭ್ರಮಿಸುವುದರ ಬದಲು ನೇರವಾಗಿ ಪೊಲೀಸ್ ಕಂಟ್ರೋಲ್ ರೂಮ್ ಗೆ ಫೋನ್ ಮಾಡಿ ರಕ್ಷಣೆ ಕೋರಿದ್ದಾನೆ. ಇಮಾಮ್ ಹುಸೇನ್ ಮನವಿಯ ಮೇರೆಗೆ ಸಹಕಾರಿ ಬ್ಯಾಂಕ್ ’ನ ಅಧಿಕಾರಿಗಳಿಗೆ ಪೊಲೀಸರು ಫೋನ್ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಮರುದಿನ ಬರುವುದಾಗಿ ತಿಳಿಸಿದ್ದಾರೆ. ಅಧಿಕಾರಿಗಳು ಬರುವವರೆಗೂ ತಾನು ತೆರಳುವುದಿಲ್ಲ ಎಂದು ಹಠ ಹಿಡಿದು ಕುಳಿತ ಲಾಟರಿ ವಿಜೇತ, ಆ ರಾತ್ರಿಯನ್ನು ಅಲ್ಲೇ ಕಳೆದಿದ್ದಾನೆ. ಬಳಿಕ ಪೊಲೀಸರ ಸಮ್ಮುಖದಲ್ಲೇ ಅಧಿಕಾರಿಗಳಿಗೆ ಲಾಟರಿ ಟಿಕೆಟ್ ಹಸ್ತಾಂತರಸಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಡಿವೈ ಎಸ್’ ಪಿ ಕೃಷ್ಣದಾಸ್, ಲಾಟರಿ ಗೆದ್ದ ವಿಷಯ ತಿಳಿದ ಬಳಿಕ ತನಗೆ ಯಾರಾದರೂ ಅಪಾಯವನ್ನುಂಟು ಮಾಡಬಹುದು ಎಂದು ಹಸೇನ್ ಭಯಬೀತನಾಗಿದ್ದ. ಹೀಗಾಗಿ ಲಾಟರಿ ಗೆದ್ದ ವಿಷಯಯವನ್ನು ಯಾರ ಬಳಿಯೂ ಹೇಳದೆ ನೇರವಾಗಿ ಪೊಲೀಸ್ ಕಂಟ್ರೋಲ್ ರೂಮ್ ’ಗೆ ಫೋನ್ ಮಾಡಿದ್ದಾನೆ ಎಂದಿದ್ದಾರೆ. ಇಮಾಮ್ ಹುಸೇನ್ ಪಶ್ಚಿಮ ಬಂಗಾಳದ ಮಾಲ್ಡ ಮೂಲದವವನಾಗಿದ್ದು, 5 ವರ್ಷಗಳ ಹಿಂದೆ ಕೇರಳಕ್ಕೆ ಕೆಲಸ ಅರಸಿ ಬಂದಿದ್ದ. ಲಾಟರಿ ಗೆದ್ದ ಬಹುಮಾನದ ಹಣದಿಂದ ಸ್ವಂತ ಊರಲ್ಲಿ ಮನೆ ಕಟ್ಟಬೇಕು, ಉಳಿದ ಹಣದಲ್ಲಿ ವ್ಯವಹಾರ ಪ್ರಾರಂಭಿಸಬೇಕು ಎಂಬ ಆಲೋಚನೆ ಇದೆ ಎಂದು ಹುಸೇನ್ ಹೇಳಿದ್ದಾರೆ.