ಉತ್ತರ ಪ್ರದೇಶದಲ್ಲಿ ಮುಂದುವರಿದ ಗುಂಪು ಹತ್ಯೆ: 50 ವರ್ಷ ಪ್ರಾಯದ ಮುಸ್ಲಿಮ್ ವ್ಯಕ್ತಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

Prasthutha|

ಉತ್ತರ ಪ್ರದೇಶ: ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ಬುಧವಾರ ಗುಂಪು ಹತ್ಯೆ ಮಾಡಲಾಗಿದೆ.
ಹತ್ಯೆಗೀಡಾದವರನ್ನು ಕೊತ್ವಾಲಿ ಪ್ರದೇಶದ ಗರ್ಹಕುರ್ದ್ ಗ್ರಾಮದ ನಿವಾಸಿ ಖುರ್ಷಿದ್ ಅಹ್ಮದ್ (50) ಎಂದು ಗುರುತಿಸಲಾಗಿದೆ.
ಮೃತರ ಸಹೋದರ ಝಹೀರ್ ಅಹ್ಮದ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -


ಇದು ಖಂಡಿತವಾಗಿಯೂ ಗುಂಪು ಹತ್ಯೆಯ ಪ್ರಕರಣವಾಗಿದೆ. ಖುರ್ಷಿದ್ ಅವರು ಗಡ್ಡ ಇಟ್ಟಿದ್ದರು, ಅದೇ ರೀತಿ ತಲೆಗೆ ಟೋಪಿ ಧರಿಸಿದ್ದರು. ಅವರನ್ನು ಧಾರ್ಮಿಕ ದ್ವೇಷದಿಂದ ಹತ್ಯೆ ಮಾಡಲಾಗಿದೆ ಎಂದು ಖುರ್ಷಿದ್ ಅವರ ಕಿರಿಯ ಸಹೋದರ ಅನ್ವರ್ ಅವರು ಆರೋಪಿಸಿದ್ದಾರೆ.


ಖುರ್ಷಿದ್ ಅವರ ಹತ್ಯೆ ಪಂಡಿತ್ ಮತ್ತು ಠಾಕೂರ್ ಗಳ ಪ್ರಾಬಲ್ಯವಿರುವ ಪ್ರದೇಶದಲ್ಲಿ ನಡೆದಿದೆ. ಯಾವುದೋ ವಿವಾದದಿಂದಾಗಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ ಆದರೆ ಇದು ಸುಳ್ಳು, ಅವರಿಗೆ ಯಾರೊಂದಿಗೂ ವಿವಾದ ಇರಲಿಲ್ಲ ಅವರು ನೆರೆಹೊರೆಯ ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಅನ್ವರ್ ಹೇಳಿದ್ದಾರೆ.

- Advertisement -


ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಇನ್ನೆರಡು ದಿನಗಳಲ್ಲಿ ಲಭ್ಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ವ್ಯಕ್ತಿಗಳು ಅಹ್ಮದ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಇದರಿಂದ ಅವರು ಗಾಯಗೊಂಡಿದ್ದರು, ಬಳಿಕ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಮಿಶ್ರಾ ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಓರ್ವನನ್ನು ಹಿಮಾಂಶು ಪಾಂಡೆ ಎಂದು ಗುರುತಿಸಿದ್ದು, ಆತನನ್ನು ಬಂಧಿಸಲು ಪೊಲೀಸರು ಶೋಧ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ಖುರ್ಷಿದ್ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯಾಗಿದ್ದು, ಅವಿವಾಹಿತರಾಗಿದ್ದರು. ಅವರಿಗೆ ಯಾವುದೇ ಉದ್ಯೋಗ ಇರಲಿಲ್ಲ. ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ, ನವಜಾತ ಶಿಶುಗಳಿಗೆ ಅಝಾನ್ ಪಠಿಸುತ್ತಿದ್ದರು. ಅವರಿಗೆ ಪ್ರಾರ್ಥನೆ ಮಾಡುತ್ತಿದ್ದರು ಎಂದು ಅವರ ಸಹೋದರ ಅನ್ವರ್ ತಿಳಿಸಿದ್ದಾರೆ.


ಖುರ್ಷಿದ್ ಮಂಗಳವಾರ ನಾಪತ್ತೆಯಾಗಿದ್ದರು. ಬುಧವಾರ, ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಯಿತು. ಅವರು ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಬುಧವಾರ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.



Join Whatsapp