ವೇದಿಕೆಯಲ್ಲಿ ಪಿಸುಗುಟ್ಟ ಮಾತು ಬಹಿರಂಗ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿ.ಎಸ್. ಉಗ್ರಪ್ಪ ಮತ್ತು ಮತ್ತೋರ್ವ ನಾಯಕ ಸಲೀಂ ಎಂಬವರು ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ನೀಡಿದ್ದ ಸ್ಫೋಟಕ ಮಾತುಗಳು ಬಹಿರಂಗಗೊಂಡಿದ್ದು, ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿದೆ.
ಡಿ.ಕೆ. ಶಿವಕುಮಾರ್ ಕಲೆಕ್ಷನ್ ಗಿರಾಕಿ, ಅವರ ಬಳಿ ಸುಮಾರು 50ರಿಂದ 100 ಕೋಟಿ ಇದೆ, ಡಿಕೆ ಶಿವಕುಮಾರ್ ದೊಡ್ಡ ಸ್ಕ್ಯಾಮ್ ಎಂದು ಸಲೀಂ ಹೇಳುತ್ತಿರುವುದು ವೀಡಿಯೋದಲ್ಲಿ ಬಹಿರಂಗಗೊಂಡಿದೆ.
ವಿ.ಎಸ್. ಉಗ್ರಪ್ಪ ಅವರು ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಗೋಷ್ಠಿ ಆರಂಭಕ್ಕೂ ಮುನ್ನ ಪಕ್ಕದಲ್ಲಿ ಕುಳಿತಿದ್ದ ಸಲೀಂ ಅವರು ಉಗ್ರಪ್ಪ ಅವರೊಂದಿಗೆ ಮಾತು ಆರಂಭಿಸಿ ಡಿಕೆಶಿ ವಿರುದ್ಧ ಹರಿಹಾಯ್ದಿದ್ದರು. ಆ ವೇಳೆ ಕ್ಯಾಮರಾ ಆನ್ ಆಗಿತ್ತು. ಇದನ್ನು ಗಮನಿಸದ ಈ ಇಬ್ಬರು ನಾಯಕರು ಪರಸ್ಪರ ಮಾತು ಮುಂದುವರಿಸಿದ್ದರು. ಇವೆಲ್ಲವೂ ರೆಕಾರ್ಡ್ ಆಗಿದೆ.
ಇದೇ ವೇಳೆ ಸಿದ್ದರಾಮಯ್ಯ ಬಗ್ಗೆಯೂ ಇಬ್ಬರು ಕಾಂಗ್ರೆಸ್ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಖಡಕ್ ಅಂದರೆ ಖಡಕ್ ಆಗಿ ಮಾತನಾಡುತ್ತಾರೆ. ಶಿವಕುಮಾರ್ ಮಾತನಾಡುವಾಗ ತೊದಲುತ್ತಾರೆ ಎಂದು ಸಲೀಂ ಹೇಳಿದ್ದಾರೆ. ಅವರೇನು ಡ್ರಿಂಕ್ಸ್ ಮಾಡ್ತಾರಾ? ಡ್ರಿಂಕ್ಸ್ ಮಾಡಲ್ಲ ಅಲ್ವಾ ಎಂದು ವಿಎಸ್ ಉಗ್ರಪ್ಪ ಕೇಳುತ್ತಾರೆ. ಈ ವೀಡಿಯೋ ವೈರಲ್ ಆಗಿತ್ತು. ಕಾಂಗ್ರೆಸ್ ನಾಯಕರು ಮುಜುಗರ ಎದುರಿಸುತ್ತಿದ್ದಾರೆ.
ಈ ಮಧ್ಯೆ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ? ಎಂದು ಬಿಜೆಪಿ ಪ್ರಶ್ನಿಸಿದೆ.
ಮಾನ್ಯ ಡಿಕೆಶಿ ಅವರೇ, ಸೀಸರ್ ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ?
ಕೆಪಿಸಿಸಿ ಕಚೇರಿಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಪಕ್ಷ ತವರು ಮನೆಯಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕುಟುಕಿದೆ.