ಬೆಂಗಳೂರು: ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಒಟ್ಟು 50 ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಿದ್ದು, ಅದರಂತೆ 45 ಅಭ್ಯರ್ಥಿಗಳು ವಿಚಾರಣೆಗೆ ಹಾಜರಾದರು. ಆದರೆ ಐವರು ಗೈರಾಗಿದ್ದಾರೆ.
50 ಅಭ್ಯರ್ಥಿಗಳಿಗೆ ನೊಟೀಸ್ ಜಾರಿ ಮಾಡಿದ್ದ ಸಿಐಡಿ ತಂಡವು ವಿಚಾರಣೆಗೆ ಹಾಜರಾಗುವಾಗ ಹಾಲ್ಟಿಕೆಟ್, ಒಎಂಆರ್ ಶೀಟ್ ನ ಕಾರ್ಬನ್ ಪ್ರತಿ ತರಬೇಕು ಎಂದು ಸೂಚಿಸಿತ್ತು.
ಸಿಐಡಿ ಡಿವೈಎಸ್ ಪಿಗಳಾದ ನರಸಿಂಹಮೂರ್ತಿ ಮತ್ತು ಪಿ.ಪ್ರಕಾಶ್ ರಾಥೋಡ್ ನೇತೃತ್ವದ ತಂಡವು ಸತತ ಮೂರು ಗಂಟೆಗಳ ಕಾಲ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿತು. ಪ್ರತಿಯೊಬ್ಬರನ್ನೂ ಸಿಐಡಿಯ ವಿಚಾರಣಾ ಕೊಠಡಿಗೆ ಕರೆಸಿ ದಾಖಲೆ ಪರಿಶೀಲಿಸಲಾಯಿತು. ಪ್ರತಿ ಅಭ್ಯರ್ಥಿಯಿಂದ ಹೇಳಿಕೆ ಬರೆಸಿಕೊಳ್ಳುವುದರ ಜೊತೆಗೆ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು.