ಅಹಮದಾಬಾದ್‌ನಲ್ಲಿ ಆರಂಭವಾದ 36ನೇ ರಾಷ್ಟ್ರೀಯ ಕ್ರೀಡಾಕೂಟದ ಮೊದಲ ದಿನ ಒಂದು ಕೂಟ ದಾಖಲೆ ಮತ್ತು ಒಂದು ರಾಷ್ಟ್ರೀಯ ದಾಖಲೆ ನಿರ್ಮಾಣವಾಗಿದೆ. 400 ಮೀಟರ್ ಓಟ ವಿಭಾಗದಲ್ಲಿ 46.30 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಕೇರಳದ ಅಮೊಜ್ ಜೇಕಬ್, ನೂತನ ಕೂಟ ದಾಖಲೆ ಬರೆದರು. ಆ ಮೂಲಕ ಹೊಸ ದಾಖಲೆಯೊಂದಿಗೆ ಪುರುಷರ 400 ಮೀಟರ್‌ನ ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ.
ಮುನಿತಾ ಪ್ರಜಾಪತಿ ರಾಷ್ಟ್ರೀಯ ದಾಖಲೆ
ಮಹಿಳೆಯರ 20 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಉತ್ತರಪ್ರದೇಶ ಮುನಿತಾ ಪ್ರಜಾಪತಿ, ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 1.38.20 ಸಮಯದಲ್ಲಿ ಪ್ರಜಾಪತಿ ಗೆಲುವಿನ ಗುರಿ ದಾಟಿದರೆ, ಮೂರು ನಿಮಿಷಗಳ ಬಳಿಕ ಉತ್ತರಾಖಂಡದ ಮಾನ್ಸಿ ನೇಗಿ ದ್ವಿತೀಯ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಕಡುಬಡತನ ಹಿನ್ನಲೆಯವರಾದ ಮುನಿತಾ ಪ್ರಜಾಪತಿಗೆ ಚಿನ್ನದ ಪದಕ ಜೊತೆ ನಗದು ಬಹುಮಾನ ದೊರೆಯುತ್ತಿರುವುದು ತಮ್ಮ ಕುಟುಂಬದ ಕಷ್ಟಗಳಿಗೆ ಸಣ್ಣ ಪ್ರಮಾಣದಲ್ಲಾದರೂ ಆಶ್ವಾಸನೆಯಾಗಲಿದೆ ಎಂದಿದ್ದಾರೆ.
6 ಲಕ್ಷ ರೂಪಾಯಿ ನಗದು ಬಹುಮಾನ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಅಥ್ಲೀಟ್‌ಗಳಿಗೆ ಉತ್ತರಪ್ರದೇಶ ಸರ್ಕಾರ 6 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ವಾರಣಾಸಿಯಿಂದ 15 ಕಿಲೋಮೀಟರ್ ದೂರದ ಸಹ್ವಾಜ್‌ಪುರ್‌ನವರಾದ ಮುನಿತಾ ತಂದೆ ಬಿರ್ಜು ಪ್ರಜಾಪತಿ, ಮುಂಬೈನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲಸದ ನಡುವೆ ವಿದ್ಯುತ್ ಶಾಕ್ ತಗುಲಿದ ಕಾರಣ ಕೈ ಕಾಲಿನ ಬೆರಳುಗಳು ನಷ್ಟವಾಗಿತ್ತು. ಮನೆಯ ಆದಾರಸ್ಥಂಭವಾಗಿದ್ದ ತಂದೆಯ ಆದಾಯ ನಿಂತ ಬಳಿಕ, ತೀವ್ರ ಸಂಕಷ್ಟದ ನಡುವೆಯೂ ಮುನಿತಾಳ ಕ್ರೀಡಾ ಪಯಣ ಮುಂದುವರಿದಿತ್ತು.
ದ್ಯುತಿ ಚಾಂದ್ ಹಿಂದಿಕ್ಕಿದ ಜ್ಯೋತಿ ಯರ್ರಾಜಿ
ಅಚ್ಚರಿಯ ಫಲಿತಾಂಶ ದಾಖಲಿಸಿದ 100 ಮೀ ಹರ್ಡಲ್ಸ್‌ನಲ್ಲಿ, ಖ್ಯಾತ ಓಟಗಾತಿ ದ್ಯುತಿ ಚಂದ್ ಅವರನ್ನು ಹಿಂದಿಕ್ಕಿದ ಜ್ಯೋತಿ ಯರ್ರಾಜಿ (11.45 ಸೆಕೆಂಡ್ ಸಮಯ) ಮೊದಲಿಗಳಾಗಿ ಗುರಿ ತಲುಪಿದರು. 100 ಮೀ ಹರ್ಡಲ್ಸ್‌ನಲ್ಲಿ ಜ್ಯೋತಿ, ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಚಾಲನೆ
ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೆ ಗುಜರಾತ್ ರಾಜ್ಯದ ಆರು ನಗರಗಳಲ್ಲಿ ನಡೆಯುವ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದರು. 7 ವರ್ಷಗಳ ಬಳಿಕ ನಡೆಯುತ್ತಿರುವ ರಾಷ್ಟ್ರೀಯ ಗೇಮ್ಸ್‌ಗೆ ಗುಜರಾತ್ ಆತಿಥ್ಯ ವಹಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಯನ್‌ಗಳಾದ ಪಿವಿ ಸಿಂಧು, ನೀರಜ್ ಚೋಪ್ರಾ ಮತ್ತು ರವಿಕುಮಾರ್ ದಹಿಯಾ ಕೂಡ ಉಪಸ್ಥಿತರಿದ್ದರು.
6 ನಗರಗಳಲ್ಲಿ ಸ್ಪರ್ಧೆ
ಅಹಮದಾಬಾದ್, ಗಾಂಧಿನಗರ, ಸೂರತ್, ವಡೋದರ, ರಾಜ್‌ಕೋಟ್ ಮತ್ತು ಭಾವ್‌ನಗರಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಸೈಕ್ಲಿಂಗ್ ಸ್ಪರ್ಧೆಗಳನ್ನು ನವದೆಹಲಿಯಲ್ಲಿ ನಡೆಸಲಾಗುತ್ತದೆ.
28 ರಾಜ್ಯ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 7000ಕ್ಕೂ ಹೆಚ್ಚು ಕ್ರೀಡಾಪಟುಗಳು, 36ಕ್ಕೂ ಹೆಚ್ಚು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕ್ರೀಡಾಕೂಟದಲ್ಲಿ ದೇಸಿ ಕ್ರೀಡೆಗಳಾದ ಮಲ್ಲಕಂಭ ಮತ್ತು ಯೋಗಾಸನವನ್ನು ಸೇರ್ಪಡೆಗೊಳಿಸಲಾಗಿದೆ. ಕಳೆದ ಆವೃತ್ತಿಯ ರಾಷ್ಟ್ರೀಯ ಕ್ರೀಡಾಕೂಟವು 2015ರಲ್ಲಿ ಕೇರಳದಲ್ಲಿ ನಡೆದಿತ್ತು.