ಲಿಬಿಯಾ: ಲಿಬಿಯಾ ಪಡೆಗಳು ಮತ್ತು ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 159 ಜನರು ಗಾಯಗೊಂಡಿದ್ದಾರೆ. ಭಾನುವಾರದ ಸಾವಿನ ಸಂಖ್ಯೆಯು ಗಮನಾರ್ಹವಾದ ಹೊಸ ಸಂಘರ್ಷದ ಭಯವನ್ನು ಹುಟ್ಟುಹಾಕಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
ಲಿಬಿಯಾದ ಪ್ರತಿಸ್ಪರ್ಧಿ ಸರ್ಕಾರಗಳ ಬೆಂಬಲಿಗರ ಗುಂಪು ಶುಕ್ರವಾರ ಸಂಜೆಯಿಂದಲೇ ದಾಳಿ ಪ್ರಾರಂಭಿಸಿದ್ದು, ಹಲವಾರು ಆಸ್ಪತ್ರೆಗಳನ್ನು ಹಾನಿಗೊಳಿಸಿದ್ದಲ್ಲದೆ, ಕಟ್ಟಡಗಳಿಗೆ ಬೆಂಕಿ ಹಚ್ಚಿ ಗುಂಡಿನ ದಾಳಿ ನಡೆಸಿದ್ದವು. ದಾಳಿಯಿಂದಾಗಿ ಆರು ಆಸ್ಪತ್ರೆಗಳು ಹಾನಿಗೊಂಡಿದ್ದು, ಆಂಬ್ಯುಲೆನ್ಸ್‌ಗಳು ಘರ್ಷಣೆ ಪೀಡಿತ ಪ್ರದೇಶಗಳಿಗೆ ತಲುಪಲು ಸಾಧ್ಯವಾಗಲಿಲ್ಲ ಎಂದು ಸಚಿವಾಲಯವು ಮಾಹಿತಿ ನೀಡಿದೆ.
ಉತ್ತರ ಆಫ್ರಿಕಾದ ದೇಶ ಮತ್ತು ಅದರ ಬೃಹತ್ ತೈಲ ಸಂಪನ್ಮೂಲಗಳ ನಿಯಂತ್ರಣಕ್ಕಾಗಿ ಸ್ಪರ್ಧಿಸುತ್ತಿರುವ ಎರಡು ಪ್ರತಿಸ್ಪರ್ಧಿ ಆಡಳಿತಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಈ ಸಂಘರ್ಷ ನಡೆದಿದೆ.
ಒಂದು ಸೇನಾಪಡೆಯು ಇನ್ನೊಂದರ ಮೇಲೆ ಗುಂಡು ಹಾರಿಸಿದಾಗ ಈ ಘರ್ಷಣೆಗಳು ಸಂಭವಿಸಿದವು ಎಂದು ಟ್ರಿಪೋಲಿಯಲ್ಲಿ ನೆಲೆಗೊಂಡಿರುವ ಪ್ರಧಾನಿ ಅಬ್ದುಲ್ ಹಮೀದ್ ದ್ಬೀಬಾ ಅವರ ಸರ್ಕಾರವು ಹೇಳಿದೆ.
ಆದಾಗ್ಯೂ, ಈ ಹೋರಾಟವು ದ್ಬೀಬಾ ಮತ್ತು ಕರಾವಳಿ ನಗರವಾದ ಸಿರ್ಟೆಯಿಂದ ಕಾರ್ಯನಿರ್ವಹಿಸುತ್ತಿರುವ ಅವರ ಪ್ರತಿಸ್ಪರ್ಧಿ ಪ್ರಧಾನ ಮಂತ್ರಿ ಫಾತಿ ಬಶಾಘಾ ನಡುವೆ ನಡೆಯುತ್ತಿರುವ ಅಧಿಕಾರದ ಹೋರಾಟದ ಭಾಗವಾಗಿದೆ. ಇವರಿಬ್ಬರೂ ಸೇನಾಪಡೆಗಳಿಂದ ಬೆಂಬಲಿತರಾಗಿದ್ದಾರೆ.