ದುಬೈ: ತೀವ್ರ ಕುತೂಹಲ ಕೆರಳಿಸಿದ್ದ ಟೀಮ್ ಇಂಡಿಯಾ-ಪಾಕಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ಮಹತ್ತರ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 147 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಭಾರತ, 5 ವಿಕೆಟ್ ನಷ್ಟದಲ್ಲಿ ಕೇವಲ ಎರಡು ಎಸೆತಗಳು ಬಾಕಿ ಇರುವಂತೆಯೇ ರೋಚಕ ಗೆಲುವಿನ ನಗೆ ಬೀರಿತು.
ಟೀಮ್ ಇಂಡಿಯಾ ಪರ ಆರಂಭಿಕನಾಗಿ ಮೈದಾನಕ್ಕಿಳಿದಿದ್ದ ಕೆ.ಎಲ್. ರಾಹುಲ್, ತಾನು ಎದುರಿಸಿದ ಪ್ರಥಮ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ತೀವ್ರ ನಿರಾಸೆ ಅನುಭವಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ, 34 ಎಸೆತಗಳಲ್ಲಿ 35 ರನ್‌ಗಳಿಸಿದ್ದ ವೇಳೆ ಲಾಂಗ್ ಆನ್‌ನಲ್ಲಿ ಸುಲಭ ಕ್ಯಾಚಿತ್ತು ನಿರ್ಗಮಿಸಿದರು. ಆ ಮೂಲಕ ವೃತ್ತಿ ಜೀವನದ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಕನಿಷ್ಠ ಅರ್ಧಶತಕ ದಾಖಲಿಸಲು ವಿಫಲರಾದರು. ನಾಯಕ ರೋಹಿತ್ ಶರ್ಮಾ 12 ರನ್‌ಗಳಿಸಿ ವಿಕೆಟ್ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ 18 ರನ್‌ಗಳಿಸಿದರು.
ಆಸರೆಯಾದ ರವೀಂದ್ರ ಜಡೇಜಾ, ಪಾಂಡ್ಯಾ
15 ಓವರ್‌ಗಳ ಅಂತ್ಯಕ್ಕೆ ಪಂದ್ಯದಲ್ಲಿ ಉಭಯ ತಂಡಗಳಿಗೆ ಗೆಲುವಿನ ಅವಕಾಶವಿತ್ತು. ಆದರೆ ಈ ವೇಳೆ ಒಂದಾದ ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಜಡೇಜಾ, 35 ರನ್‌ಗಳಿಸಿದರೆ, ಸಿಕ್ಸರ್ ಮೂಲಕ ಮ್ಯಾಚ್ ಫಿನಿಶ್ ಮಾಡಿದ ಹಾರ್ದಿಕ್ ಪಾಂಡ್ಯಾ 33 ರನ್‌ಗಳಿಸಿ ಅಜೇಯರಾಗುಳಿದರು.
147 ರನ್‌ಗಳಿಗೆ ಪಾಕಿಸ್ತಾನ ಆಲೌಟ್
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, 19.5 ಓವರ್‌ಗಳಲ್ಲಿ 147 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್ ಅಝಮ್, ಕೇವಲ 10 ರನ್ ಗಳಿಸಿದ್ದ ವೇಳೆ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಮುಹಮ್ಮದ್ ರಿಝ್ವಾನ್ ತಾಳ್ಮೆಯ ಆಟದ ಮೂಲಕ 43 ರನ್‌ಗಳಿಸಿದ್ದ ವೇಳೆ ಪಾಂಡ್ಯಾ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇಫ್ತಿಕಾರ್ ಅಹ್ಮದ್ 28 ರನ್‌ಗಳಿಸಿದರು.
ಭಾರತದ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಿಟಿಸಿದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ 4 ವಿಕೆಟ್ ಪಡೆದರೆ, ಆಲ್‌ರೌಂಡರ್ ಹಾರ್ದಿಕ್ 3 ವಿಕೆಟ್ ಪಡೆದರು. ಅರ್ಷ್‌ದೀಪ್ ಸಿಂಗ್ ಎರಡು ಮತ್ತು ಆವೇಶ್ ಖಾನ್ ಎರಡು ವಿಕೆಟ್ ಪಡೆದರು.